ವೈಜ್ಞಾನಿಕ, ವೈಚಾರಿಕ ಮನೋಭಾವದಿಂದ ಮೂಢನಂಬಿಕೆ ದೂರ

ಕಲಬುರಗಿ,ಆ.4-ಪ್ರತಿಯೊಬ್ಬರು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳಿಸಿಕೊಂಡಾಗ ಮಾತ್ರ ಮೂಢನಂಬಿಕೆಯನ್ನು ಹೊಡೆದೋಡಿಸಲು ಸಾಧ್ಯವಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ ಎಫ್.ಸಿ.ಚೇಗರೆಡ್ಡಿ ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ನಗರದ ಎಂ.ಪಿ.ಹೆಚ್.ಎಸ್.ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಎರಡು ದಿನಗಳ ಪವಾಡಗಳ ರಹಸ್ಯ ಬಯಲು  ಕಾರ್ಯಾಗಾರ  ಹಾಗೂ ರಾಷ್ಟ್ರೀಯ ವೈಚಾರಿಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಲ್ಲಿ ಅಂಧಶ್ರದ್ಧೆಯನ್ನು ಹೋಗಲಾಡಿಸಲು ಹೋರಾಟ ನಡೆಸಿದ ನರೇಂದ್ರ ಧಾಬೋಲ್ಕರ್ ಅವರ ಕೊನೆಯ ದಿನವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ವೈಚಾರಿಕ ದಿನವನ್ನಾಗಿ ಆಚರಿಸುತ್ತಿದೆ. ವೈದ್ಯರಾಗಿದ್ದ ಧಾಬೋಲ್ಕರ್ ಅವರು, ಮಹಾರಾಷ್ಟ್ರದಾದ್ಯಂತ ತಿರುಗಾಡಿ ಅಂಧಶ್ರದ್ಧೆ, ಮೌಢ್ಯತೆ ಹೋಗಲಾಡಿಸಲು ಸಾಕಷ್ಟು ಶ್ರಮಿಸಿದರು. ಆದರೆ ಮೌಢ್ಯವನ್ನು ಪ್ರತಿಪಾದಿಸುವ ದುಷ್ಟಶಕ್ತಿಗಳು ಅವರನ್ನು ಹತ್ಯೆ ಮಾಡಿದವು. ವ್ಯಕ್ತಿಯನ್ನು ಹತ್ಯೆ ಮಾಡಬಹುದೆ ಹೊರತು ಆಲೋಚನೆಗಳನ್ನು ಕೊಲ್ಲಲು ಆಗುವುದಿಲ್ಲ ಎಂದರು. ವೈಚಾರಿಕತೆಯ ಕತ್ತು ಹಿಸುಕುವ, ಧ್ವನಿ ಅಡಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ ಎಂದರು. ಇಂದಿನಿಂದ ಆಗಸ್ಟ್ 20 ರವರೆಗೆ ನಗರದ 50ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವೈದ್ಯ ಡಾ.ಎಸ್.ಎಸ್.ಗುಬ್ಬಿ ಅವರು ಮಾತನಾಡಿ, ಜನ ನಂಬಿಕೆ ಬಿಟ್ಟು ಮೂಢನಂಬಿಕೆಯತ್ತ ವಾಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದ ಜನ ಮೌಢ್ಯವನ್ನು ಹೆಚ್ಚು ನಂಬುತ್ತಿದ್ದಾರೆ. ಆರ್ಥಿಕವಾಗಿ, ಶೈಕ್ಷಣಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿಯಾದಾಗ ಮೌಢ್ಯವನ್ನು ಹೊಡೆದೋಡಿಸಲು ಸಾಧ್ಯವಿದೆ ಎಂದರು.

ಪ್ರಗತಿಪರ ಚಿಂತಕಿ ಕೆ.ನೀಲಾ ಅವರು ಮಾತನಾಡಿ, ದೇಶ ಉಳಿಸಲು ಇಂದು ಪ್ರತಿಯೊಬ್ಬರಲ್ಲಿ ವೈಜ್ಞಾನಿಕ, ವೈಚಾರಿಕ ದೃಷ್ಟಿಕೋನ ಬೆಳೆಸಬೇಕಿದೆ. ಬದುಕಿನ ಪ್ರತಿ ಘಟ್ಟದಲ್ಲಿ ಇದನ್ನು ಜಾರಿ ಮಾಡಿದಾಗ ಮೌಢ್ಯವನ್ನು ಹೊಡೆದೋಡಿಸಲು ಸಾಧ್ಯವಿದೆ ಎಂದರು.

ಡಾ.ಶ್ರೀಶೈಲ ಘೂಳಿ, ಕೆ.ಎಸ್.ಮಾಲಿಪಾಟೀಲ, ಪ್ರೊ.ಆರ್.ಕೆ.ಹುಡಗಿ ವೇದಿಕೆ ಮೇಲಿದ್ದರು. ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಮೂಳೆಗಾಂವ ಅಧ್ಯಕ್ಷತೆ ವಹಿಸಿದ್ದರು. ನಾಗೇಂದ್ರಪ್ಪ ಅವರಾದಿ ಕಾರ್ಯಕ್ರಮ ನಿರೂಪಿಸಿದರು.

Leave a Comment