ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಲು ಕರೆ

ಕೆ.ಆರ್.ಪೇಟೆ, ಆ.1- ರೈತರು ಕೃಷಿ ತಜ್ಞರ ಸಲಹೆ ಸೂಚನೆಗಳನ್ನು ಪಡೆದುಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಬೇಕು. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಬೇಸಾಯ ಮಾಡಿದರೆ ಕಡಿಮೆ ಖರ್ಚು, ಹೆಚ್ಚು ಲಾಭ ಗಳಿಸಬಹುದು ಅಲ್ಲದೆ ರಾಸಾಯನಿಕ ಮುಕ್ತ ಆಹಾರವನ್ನು ಜನಸಮುದಾಯಕ್ಕೆ ನೀಡಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.
ಅವರು ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯ ಆವರಣದಲ್ಲಿ ನಡೆದ ಕೃಷಿ ಪ್ರಚಾರ ಅಭಿಯಾನ ರಥಯಾತ್ರೆಗೆ ಚಾಲನೆ ನೀಡಿ ನೆರೆದಿದ್ದ ರೈತ ಬಂಧುಗಳನ್ನು ಉದ್ಧೇಶಿಸಿ ಮಾತನಾಡಿದರು.
ದೇಶದ ಆಹಾರ ಭದ್ರತೆಗೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡುತ್ತಿರುವ ರೈತರ ಬದುಕು ಇಂದು ಸಂಕಷ್ಠದಲ್ಲಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಲೆಯು ಮಾರುಕಟ್ಟೆಯಲ್ಲಿ ದೊರೆಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಸಾಯದಲ್ಲಿ ಸತತವಾದ ನಷ್ಠವನ್ನು ಅನುಭವಿಸುತ್ತಿರುವ ಸ್ವಾಭಿಮಾನಿಯಾದ ರೈತನು ಬೇರೆ ದಾರಿಯನ್ನು ಕಾಣದೇ ಆತ್ಮಹತ್ಯೆಯ ಹಾದಿಯನ್ನು ತುಳಿಯುತ್ತಿದ್ದಾನೆ. ಹಾಗಾಗಿ ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು. ಕೃಷಿ ಕ್ಷೇತ್ರವು ಉಧ್ಯಮದ ರೂಪವನ್ನು ಪಡೆಯಬೇಕು. ರೈತನಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ಹಾಗೂ ಕೃಷಿ ಹುಟ್ಟುವಳಿಗಳು ಸಕಾಲದಲ್ಲಿ ದೊರೆಯುವಂತಾಗಬೇಕು. ಆಗ ಮಾತ್ರ ಸಮೃದ್ಧ ಸ್ವಾಭಿಮಾನಿ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ ಶಾಸಕರು ರೈತರು ಕೃಷಿ ತಜ್ಞರ ಸಲಹೆ ಸೂಚನೆಗಳನ್ನು ಪಡೆದುಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಬೇಕು. ಅತಿಯಾಗಿ ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸಿ ಬೇಸಾಯ ಮಾಡದೇ ನೈಸರ್ಗೀಕ ಕೃಷಿ ಪದ್ಧತಿಯನ್ನು ಅನುಸರಿಸಿ ಶೂನ್ಯ ಬಂಡವಾಳದ ಬೇಸಾಯವನ್ನು ಮಾಡಿ ಹೆಚ್ಚಿನ ಲಾಭವನ್ನು ಗಳಿಸಿ ಮುನ್ನಡೆಯಬೇಕು ಎಂದು ಕರೆ ನೀಡಿದ ಅವರು ತಾಲೂಕಿನಾಧ್ಯಂತ ಸಂಚರಿಸಲಿರುವ ಕೃಷಿ ಪ್ರಚಾರ ರಥವು ರೈತರಲ್ಲಿ ಜಾಗೃತಿಯನ್ನು ಮೂಡಿಸಿ ಕೃಷಿ ಚಟುವಟಿಕೆಗಳ ಬಗ್ಗೆ ಸಹಾಯ ಮಾಡುತ್ತದೆ. ರೈತ ಬಂಧುಗಳು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೃಷಿ ಇಲಾಖೆಯು ನೀಡುತ್ತಿರುವ ಕೃಷಿಯ ಮಾದರಿಯ ಕೈಪಿಡಿಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಹವಾಮಾನಕ್ಕೆ ಹೊಂದುವ ಹೆಚ್ಚಿನ ಇಳುವರಿಯನ್ನು ನೀಡುವ ತಳಿಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಜೀವನವನ್ನು ಹಸನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ನಾರಾಯಣಗೌಡ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅದ್ಯಕ್ಷ ಹೆಚ್.ಟಿ.ಮಂಜು, ತಾಲೂಕು ಪಂಚಾಯಿತಿ ಸದಸ್ಯ ನಿಂಗಗೌಡ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಅಘಲಯ ರಮೇಶ್, ನಿರ್ದೇಶಕರಾದ ಎ.ಆರ್.ರಘು, ಹೆತ್ತಗೋನಹಳ್ಳಿ ನಾರಾಯಣಗೌಡ, ವಿಠಲಾಪುರ ಸುಬ್ಬೇಗೌಡ, ಜಾಗಿನಕೆರೆ ನಾರಾಯಣಗೌಡ, ರಾಮಸ್ವಾಮಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ಮಹೇಶ್‍ಚಂದ್ರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಕೃಷಿ ಅಧಿಕಾರಿಗಳಾದ ಜಯಶಂಕರಆರಾಧ್ಯ, ಶ್ರೀಧರ್, ನಾಗರಾಜು, ಸತೀಶ್‍ಚಂದ್ರ ಮತ್ತಿತರರು ಭಾಗವಹಿಸಿದ್ದರು.

Leave a Comment