‘ವೈಜ್ಞಾನಿಕ ದೃಷ್ಟಿಕೋನದಿಂದ ಮೂಢನಂಬಿಕೆ ಮೂಲೋಚ್ಛಾಟನೆ’

ಬಜ್ಪೆ(ಗುರುಪುರ), ಆ.೪- ದಕ್ಷಿಣ ಕನ್ನಡ ಜಿ ಪಂ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಆಗಸ್ಟ್ ೩ರಂದು ಮಂಗಳೂರು ತಾಲೂಕು ಉತ್ತರ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆ(೨೦೧೮) ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಜರುಗಿತು.
ನಾವೀಗ ವಿಜ್ಞಾನ ಯುಗದಲ್ಲಿದ್ದೇವೆ. ವಿದ್ಯಾರ್ಥಿಗಳು ವಿಜ್ಞಾನದ ಆಸಕ್ತಿ ಬೆಳೆಸಿಕೊಂಡು, ಈ ಕ್ಷೇತ್ರದಲ್ಲಿ ಸಾಧಿಸಲು ಇಂತಹ ವಿಜ್ಞಾನ ಗೋಷ್ಠಿ-ಸ್ಪರ್ಧೆಗಳು ನೆರವಾಗಬಹುದು ಎಂದು ಗೋಷ್ಠಿ ಉದ್ಘಾಟಿಸಿದ ತಾಪಂ ಬಜ್ಪೆ ಸದಸ್ಯೆ ಉಷಾ ಸುವರ್ಣ ಅಭಿಪ್ರಾಯಪಟ್ಟರು.
ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಶೆಟ್ಟಿ ಮಾತನಾಡುತ್ತ ವೈಜ್ಞಾನಿಕ, ವೈಚಾರಿಕತೆಯ ಗೋಷ್ಠಿಗಳು ಮಕ್ಕಳಲ್ಲಿ ಪ್ರಶ್ನೆಗಳು ಹುಟ್ಟುಹಾಕುವುದರೊಂದಿಗೆ ಉತ್ತರಕ್ಕಾಗಿ ಪ್ರೇರೇಪಿಸಬೇಕು. ಮಕ್ಕಳು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಂಡಾಗ ಮೂಢನಂಬಿಕೆ, ಕಂದಾಚಾರ ಮೂಲೋಚ್ಛಾಟನೆ ಸಾಧ್ಯ. ಮಳೆ ಬರದಿದ್ದಾಗ ಕೃತಕ ಮಳೆ ಬರಿಸುತ್ತೇವೆ. ಆದರೆ ಮಳೆ ಬರದಿರಲು ಕಾರಣ ಹುಡುಕುತ್ತ ಹೋಗುವುದು ವಿಜ್ಞಾನವಾಗುತ್ತದೆ ಎಂದು ಹೇಳಿದರು.
ಬಜ್ಪೆ ಗ್ರಾಪಂ ಅಧ್ಯಕ್ಷೆ ರೋಜಿ ಮಥಾಯಿಸ್ ಮಾತನಾಡುತ್ತ, ಮನೆಯಲ್ಲಿದ್ದುಕೊಂಡೇ ವಿಶ್ವದ ಆಗುಹೋಗು ನೋಡುವಂತಹ ವಿಜ್ಞಾನ ನಮ್ಮ ಮುಂದಿದೆ. ವಿಜ್ಞಾನದಿಂದ ಕೆಡುಕುಗಳಿವೆ. ನಾವು ತಿನ್ನುವ ಆಹಾರದಲ್ಲಿ ರಾಸಾಯನಿಕಗಳು ಸೇರಿರುತ್ತವೆ. ಮನುಷ್ಯರ ಮೇಲೆ ದುಷ್ಪರಿಣಾಮ ಬೀರುವಂತಹ ವಿಷಯ ತಡೆಯಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಸಾಧನೆ ಮಹತ್ವದ್ದಾಗಿದೆ ಎಂದರು.
ಉತ್ತರ ವಲಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಂಜುಳಾ ಮಾತನಾಡುತ್ತ, ನಮ್ಮ ವಿಜ್ಞಾನ ಬೆಳೆದಿದ್ದರೆ ಅದರಲ್ಲಿ ಹಿಂದಿನವರ ಸಾಧನೆ ಅಲ್ಲಗಳೆಯುವಂತಿಲ್ಲ. ಅವರ ಅಲೋಚನೆಗಳು ತಟಸ್ಥವಾಗಿರುತ್ತಿದ್ದರೆ ನಾವಿಂದು ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಿರಲಿಲ್ಲ. ಹಳೆಯದನ್ನಿಟ್ಟುಕೊಂಡು ಆಧುನಿಕತೆಗೆ ತಕ್ಕಂತೆ ವಿಜ್ಞಾನದಲ್ಲಿ ಹೊಸಹೊಸ ಸಂಶೋಧನೆ ಮಾಡಬೇಕು ಎಂದರು. ಹೋಲಿ ಫ್ಯಾಮಿಲಿ ಪ್ರೌಢಶಾಲಾ ಸಂಚಾಲಕಿ ಸಿಸ್ಟರ್ ಮಾರಿಲಿಟಾ ಬಿ ಎಸ್ ವಿಜ್ಞಾನ ಗೋಷ್ಠಿ-ಸ್ಪರ್ಧೆಗೆ ಶುಭ ಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಸಂತ ಪಾಲನ್ ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೊಲಿಟಾ ಬಿ ಎಸ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ತೀರ್ಪುಗಾರರಾದ ಉಪನ್ಯಾಸಕ ಮಾಧವ, ಸುಜಾತಾ, ರಘುನಾಥ ಲಕ್ಷ್ಮೀ ಇದ್ದರು. ಶಿಕ್ಷಕ ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಕನ್ಯಾ ವಂದಿಸಿದರು. ಬಳಿಕ ಉತ್ತರ ವಲಯ ಪ್ರೌಢಶಾಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿ-ಸ್ಪರ್ಧೆ ಆರಂಭಗೊಂಡಿತು.

Leave a Comment