ವೈಜ್ಞಾನಿಕ ಜೀವನ ಪದ್ಧತಿಯಿಂದ ಸಮಾನತೆ ಮಾಯ

ಅರಸೀಕೆರೆ, ಫೆ. ೧೧- ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿರುವ ಇಂದಿನ ಮನುಷ್ಯರು ತಮ್ಮ ಮನುಷ್ಯತ್ವವನ್ನು ಮರೆಯುತ್ತಿದ್ದಾರೆ. ಇದು ಸಮಾಜಕ್ಕೆ ಪೂರಕವಾದ ಬೆಳವಣಿಗೆಯಲ್ಲ ಎಂದು ಕೆರಗೋಡಿ ರಂಗಾಪುರ ಕ್ಷೇತ್ರದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ದುಮ್ಮೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಾಮೇಶ್ವರಸ್ವಾಮಿ ದೇವಾಲಯದ ಲೋಕಾರ್ಪಣೆ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯ ಮನುಷ್ಯತ್ವವನ್ನು ಬಿಟ್ಟು ಬಾಳುವ ಜತೆಗೆ ಶ್ರೀಮಂತಿಕೆ ವ್ಯಾಮೋಹದಿಂದ ಕೂಡಿ ಬಾಳುವ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಈ ಬೆಳವಣಿಗೆಯಿಂದ ತನಗೆ ತಾನೇ ಅರಿವಿಲ್ಲದಂತೆ ಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದರು.

ವೈಜ್ಞಾನಿಕ ಜೀವನ ಪದ್ಧತಿಯಿಂದ ಸಮಾಜದಲ್ಲಿ ಸಮಾನತೆ ಮಾಯವಾಗುತ್ತಿದೆ. ಹಣದ ಹಿಂದೆ ಬಿದ್ದಿರುವ ಮನುಷ್ಯ ವೈಭವದಿಂದ ಬದುಕಲು ನನಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿಸಬಹುದೇ ವಿನಃ ಶಾಂತಿ, ನೆಮ್ಮದಿ ಖರೀದಿಸಲು ಸಾಧ್ಯವಿಲ್ಲ. ಇದನ್ನು ಮೊದಲು ಅರಿತುಕೊಳ್ಳಬೇಕು. ಕೂಡಿ ಬಾಳುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಜತೆಗೆ ಬಸವಾದಿ ಶರಣರ ವಚನ ಹಾಗೂ ತತ್ವಗಳನ್ನು ಪಾಲಿಸುತ್ತಾ ಬದುಕನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬೇಕು ಎಂದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, ಧಾರ್ಮಿಕತೆ ಹಾಗೂ ವೈಜ್ಞಾನಿಕತೆ ನಡುವೆ ಸಮರ ನಡೆಯುತ್ತಿದೆ. ದೇವರೇ ಇಲ್ಲವೆಂದು ವಾದ ಮಾಡುವ ಜನರು ನಮ್ಮ ಸುತ್ತಮುತ್ತಲಲ್ಲೇ ಇದ್ದಾರೆ. ಮತ್ತೊಂದೆಡೆ ವಿದೇಶಿಯರು ಭಾರತಕ್ಕೆ ಬಂದು ಮಠ ಮಂದಿರಗಳಿಗೆ ಭೇಟಿ ನೀಡಿದರೆ ಮನಶಾಂತಿ ದೊರೆಯುತ್ತದೆ ಎಂದು ನಂಬಿ ಬರುವ ಜನರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗೆ ಧಾರ್ಮಿಕ ನಂಬಿಕೆಯ ಜತೆಗೆ ವೈಜ್ಞಾನಿಕತೆ ಬೆಳವಣಿಗೆ ಕೂಡ ಬೆಳೆಯುತ್ತಿದೆ. ಈ ಎರಡರ ಬೆಳವಣಿಗೆ ಮನುಷ್ಯನ ಮೇಲೆ ಪ್ರಭಾವ ಬೀರುತ್ತಿರುವುದು ಸುಳ್ಳಲ್ಲ. ಇಂತಹ ಸಂದರ್ಭಗಳಲ್ಲಿ ಮಠ ಮಂದಿರಗಳ ಗುರುಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದರು.

ಭಗವಂತನ ದೃಷ್ಟಿಯಲ್ಲಿ ಮೇಲು-ಕೀಳೆಂಬ ಭಾವನೆ ಇಲ್ಲ. ಸರ್ವರೂ ಸಮಾನರು ಎಂಬುದನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕು. ಮಠ, ಮಂದಿರ, ದೇವಾಲಯ ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿವೆ ಎಂದರೆ ಎಲ್ಲೋ ಒಂದು ಕಡೆ ಮನುಷ್ಯನಿಗೆ ದೇವರ ಮೇಲೆ ನಂಬಿಕೆ ಇರುವುದಕ್ಕೆ ಸಾಕ್ಷಿಯಾಗಿದೆ. ನಂಬಿಕೆಯೇ ನಮ್ಮ ಜೀವನ, ನಮ್ಮ ಅಂತರಂಗ ಒಪ್ಪುವಂತೆ ನಾವು ಬದುಕಿದರೆ ಸಾಕು. ಅಂತಹ ಬದುಕು ಭಗವಂತನ ಒಲುಮೆಗೆ ಪಾತ್ರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಹರಳಕಟ್ಟ ಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಪಂಚಾಯತಿ ಸದಸ್ಯ ಜಿ. ಮರಿಸ್ವಾಮಿ,  ಧರ್ಮಶೇಖರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಶಶಿಧರ, ಹಿರಿಯೂರು ರೇವಣ್ಣ, ಮುಖಂಡರಾದ ಅಣ್ಣ, ನಾಯಕನಹಳ್ಳಿ ವಿಜಯಕುಮಾರ್, ವಿರುಪಾಕ್ಷಪ್ಪ, ಗಂಗಾಧರ್, ರುದ್ರೇಶ್, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment