ವೇಶ್ಯೆಯರ ಬಾಳಿನ ಸುನೀತ

ಜಗದೀಶ್ ಗಾಂಧಿ, ಪ್ರಕಾಶ್ ಅಮ್ಟೇ, ಚಾರ್ಲೆ ಸ್ಕೋರಿಯ, ಮುತ್ತು, ಅಜಿತ್ ದೋವಲ್, ರವೀಂದ್ರ ಕೌಶಿಕ್, ಟೆಸ್ಸೀ ಥಾಮಸ್, ಸುಬೋಧ್ ಕುಮಾರ್ ಸಿಂಗ್, ನಾಗ ನರೇಶ್ ಮೊದಲಾದ ನಿಜ ಜೀವನದ ಹೀರೋಗಳ ಬಗ್ಗೆ ಸಾಕಷ್ಟು ಕತೆಗಳನ್ನು ಇದುವರೆಗೂ ನಾವು ಕೇಳಿದ್ದೇವೆ, ಅದೇ ರೀತಿ ಡಾಕ್ಟರ್ ಸುನೀತಾ ಕೃಷ್ಣನ್. ವೇಶ್ಯಾವೃತ್ತಿಯ ಬಲೆಯಲ್ಲಿ ಸಿಲುಕಿಕೊಂಡಂತಹವರನ್ನು ರಕ್ಷಿಸಿದ್ದಲ್ಲದೇ ಸಹಾಯ ಹಸ್ತವನ್ನು ನೀಡಿ, ಅವರು ತಮ್ಮ ಜೀವನವನ್ನು ಸಾಗಿಸುವಂತೆ ಮಾಡಿದ್ದಾರೆ. ಅವರು ಮಾಡಿದ ಈ ಸೇವೆಗಾಗಿ ಅವರಿಗೆ ಸಾಕಷ್ಟು ಪ್ರಶಸ್ತಿಗಳೂ ಲಭಿಸಿವೆ.

೧೯೭೨ ರಲ್ಲಿ ಬೆಂಗಳೂರಿನ ಮಲಯಾಳಿ ಕುಟುಂಬವೊಂದರಲ್ಲಿ ಸುನೀತ ಕೃಷ್ಣನ್ ಜನಿಸಿದರು. ತಂದೆ ಸರ್ವೇಯರ್ ಆದುದರಿಂದ ಸಹಜವಾಗಿಯೇ ಅವರು ದೇಶದೆಲ್ಲೆಡೆ ಸುತ್ತಾಡ ಬೇಕಾಗಿ ಬಂದಿತು. ಇದರಿಂದಾಗಿ ಅವರು ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ೮ ನೇ ವಯಸ್ಸಿನಲ್ಲಿಯೆ ಮಾನಸಿಕ ವಿಕಲಾಂಗರಿಗೆ ನೃತ್ಯಭ್ಯಾಸ ಹೇಳಿಕೊಟ್ಟರು. ೧೨ ನೆ ವಯಸ್ಸಿನಲ್ಲಿ ಬೀದಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರು. ೧೫ ನೇ ವಯಸ್ಸಿನಲ್ಲಿ ಒಂದು ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಅತ್ಯಾಚಾರಕ್ಕೆ ಒಳಗಾದರು. ಇದರಿಂದಾಗಿ ವ್ಯಭಿಚಾರ ವೃತ್ತಿಯಲ್ಲಿ ತೊಡಗಿರುವವರಿಗೆ ತನ್ನ ಸಹಾಯ ಹಸ್ತ ನೀಡಿ ರಕ್ಷಿಸುವ ಸಂಕಲ್ಪ ಮಾಡಿದರು.

ಒಡನೆಯೇ ತನ್ನ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು, ೧೯೯೬ ರಲ್ಲಿ ಒಂದು ದತ್ತಿ ಸಂಸ್ಥೆಯನ್ನು ಸ್ಥಾಪಿಸಿದರು. ಕುಟುಂಬ ಸದಸ್ಯರ ಸಹಕಾರ ದೊರೆಯದಾಗಿ ಅವರೇ ಆ ಸಂಸ್ಥೆಯನ್ನು ನಡೆಸಬೇಕೆಂದುಕೊಂಡರು. ತನ್ನ ಆಭರಣಗಳನ್ನು ಹಾಗೂ ಇತರೇ ವಸ್ತುಗಳನ್ನು ಮಾರಿ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಮಹಿಳೆಯರ ಬಾಳಿಗೆ ಊರುಗೋಲಾದರು.

ವೇಶ್ಯಾವೃತ್ತಿಯಲ್ಲಿ ಸಿಲುಕಿಕೊಂಡಿರುವ ಹಾಗೂ ಬಲವಂತವಾಗಿ ಈ ವೃತ್ತಿಗೆ ತಳ್ಳಲ್ಪಡುವವರನ್ನು ರಕ್ಷಿಸಿ ತನ್ನ ಸಂಸ್ಥೆಯಲ್ಲಿ ಆಶ್ರಯ ನೀಡಿದರು. ಹೀಗೆ ಇದುವರೆಗೂ ೧೨ ಸಾವಿರ ಮಂದಿಯನ್ನು ಕಾಪಾಡಿದ್ದಾರೆ. ಅಲ್ಲದೆ ತನ್ನ ಸಂಸ್ಥೆಯಲ್ಲೇ ಮರಗೆಲಸ, ಮುದ್ರಣ, ಮನೆಗೆಲಸ ಮೊದಲಾದವುಗಳಲ್ಲಿ ತರಭೇತಿ ನೀಡಿ ಅವರ ಕಾಲುಗಳ ಮೇಲೆ ನಿಲ್ಲುವಂತೆ ಮಾಡಿದರು.

ಅದೇರೀತಿ ದೆಹಲಿಯಲ್ಲಿ ಜರುಗಿದ ನಿರ್ಭಯಾ ಪ್ರಕರಣದಲ್ಲಿ ಸಂಸತ್‌ನಲ್ಲಿ ಒಂದು ಪ್ರತ್ಯೇಕ ಮಸೂದೆಯನ್ನೂ ತಂದರು.  ಇದರಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ದೆಹಲಿ ಮುಂತಾದ ಕಡೆಗಳಲ್ಲಿ ನಡೆಯುತ್ತಿದ್ದ    ಮಹಿಳೆಯರ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಸಹಾಯ ಹಸ್ತವನ್ನು ನೀಡಿ ಪ್ರಪಂಚದಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ನಿರ್ವಹಿಸುವಲ್ಲಿ ಮುಂದಾಳತ್ವ ವಹಿಸಿದ್ದರು.

ನಿರ್ದೇಶಕ ರಾಜೇಶ್‌ರನ್ನು ವಿವಾಹವಾದ ಈಕೆ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಪ್ರಪಂಚಕ್ಕೆ ತಿಳಿಸಲು ಸಿನಿಮಾಗಳನ್ನು ನಿರ್ಮಿಸಿದರು.’ಅನಾಮಿಕ’, ‘ನಾ ಬಂಗಾರು ತಲ್ಲಿ ಮೊದಲಾದ ಸಿನಿಮಾಗಳು ಇವರು ನಿರ್ಮಿಸಿದವುಗಳೇ ಆಗಿವೆ.

ಇವುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಲಭಿಸಿವೆ. ಇಷ್ಟೇ ಅಲ್ಲದೆ ಹಲವಾರು ಇತರೆ ಪ್ರಶಸ್ತಿಗಳೂ ದೊರಕಿವೆ. ೨೦೧೬ರಲ್ಲಿ ದೊರೆತ ಪದ್ಮಶ್ರೀ ಪ್ರಶಸ್ತಿ ಮುಖ್ಯವಾದುದು.

ಮದರ್ ತೆರೇಸಾ ಪ್ರಶಸ್ತಿ, ಗಾಡ್ ಫ್ರೇ ಫಿಲಿಫ್ ಪ್ರಶಸ್ತಿ, ಮಹಿಳಾ ತಿಲಕ ಪ್ರಶಸ್ತಿ, ಮಹೋನ್ನತ ಮಹಿಳೆ ಪ್ರಶಸ್ತಿ, ಆಕೃತಿ ವರ್ಷದ ಮಹಿಳೆ ಪ್ರಶಸ್ತಿ, ಶ್ರೇಷ್ಠ ಮಹಿಳೆ ಪ್ರಶಸ್ತಿ, ಜಿ೮ ಮಹಿಳಾ ಪ್ರಶಸ್ತಿ, ಮಾನವ ಹಕ್ಕುಗಳ ಪ್ರಶಸ್ತಿ ಯಂತಹ ಹಲವು ಪ್ರಶಸ್ತಿಗಳು ಇವರ ಮುಡಿಯನ್ನೇರಿವೆ.

Leave a Comment