ವೇಶ್ಯೆಗೆ ಪತ್ನಿ ಪಟ್ಟ ಕಟ್ಟಿ ಕಳವು ಶೋಕಿಲಾಲ ಕಳ್ಳನ ಸೆರೆ

ಬೆಂಗಳೂರು, ಜ. ೧೨- ಸೂಟುಬೂಟು ಹಾಕಿಕೊಂಡು ವೇಶ್ಯೆಯರನ್ನು ಜೊತೆಯಲ್ಲಿ ಕರೆದೊಯ್ದು ಪತ್ನಿ ಎಂದು ನಂಬಿಸಿ ಕಳವು ಮಾಡಿದ ಚಿನ್ನಾಭರಣಗಳನ್ನು ಚಿನ್ನದ ಅಂಗಡಿಗೆ ಮಾರಾಟ ಮಾ‌ಡುತ್ತಿದ್ದ ಖತರ್ನಾಕ್ ಶೋಕಿಲಾಲ ಕಳ್ಳನನ್ನು ಬಂಧಿಸಿರುವ ಬಸವನಗುಡಿ ಪೊಲೀಸರು 28 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಮಂಡಿಪೇಟೆಯ ಸೈಯದ್ ಅಹ್ಮದ್ ಅಲಿಯಾಸ್ ಇಮ್ರಾನ್ (32) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 800 ಗ್ರಾಂ ಚಿನ್ನ, ಪಲ್ಸರ್ ಬೈಕ್ ಸೇರಿ 28 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಟಿ.ಶರಣಪ್ಪ ತಿಳಿಸಿದ್ದಾರೆ.
ಆರೋಪಿಯು ಸೂಟುಬೂಟು ಧರಿಸಿ ಸೇಲ್ಸ್‌ಮೆನ್ ವೇಷದಲ್ಲಿ ಹಗಲು ವೇಳೆ ಮನೆಗಳಿಗೆ ಹೋಗಿ ಕಾಲಿಂಗ್ ಬೆಲ್ ಮಾಡುತ್ತಿದ್ದ. ಮನೆಯಿಂದ ಯಾರು ಹೊರ ಬರದೇ ಇದ್ದಾಗ ಕಬ್ಬಿಣದ ರಾಡ್‌ನಿಂದ ಮುಂಬಾಗಿಲು ಮುರಿದು ಒಳ ನುಗ್ಗಿ ಕಳವು ಮಾಡುತ್ತಿದ್ದ.
ಆರೋಪಿಯು ಹಲವು ದಿನಗಳಿಂದ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು, ಹಿಂದೆ ಗಿರಿನಗರ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದಿದ್ದರೂ ಹಳೇ ಚಾಳಿ ಬಿಟ್ಟಿರಲಿಲ್ಲ.
ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿ ಸುಮಾರು 80 ಕಡೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಆರೋಪಿಯಿಂದ ದಕ್ಷಿಣ ವಿಭಾಗದಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ.
ಬಸವನಗುಡಿಯ 2 ಪ್ರಕರಣಗಳಲ್ಲಿ 320 ಗ್ರಾಂ, ಜಯನಗರದ 1 ಪ್ರಕರಣದಲ್ಲಿ 155 ಗ್ರಾಂ, ಜೆಪಿ ನಗರದ 1 ಪ್ರಕರಣದಲ್ಲಿ 211 ಗ್ರಾಂ, ಪಶ್ಚಿಮ ವಿಭಾಗದ ಬ್ಯಾಟರಾಯನಪುರ, 25 ಗ್ರಾಂ, ಕೆಂಗೇರಿಯ 1 ಪ್ರಕರಣದಲ್ಲಿ 89 ಗ್ರಾಂ ಸೇರಿ 800 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಬಸವನಗುಡಿ ಪೊಲೀಸ್ ಇನ್ಸ್‌ಪೆಕ್ಟರ್ ಶೇಖರ್ಅವರ ನೇತೃತ್ವದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Leave a Comment