ವೇತನಕ್ಕಾಗಿ ಪೌರ ಕಾರ್ಮಿಕರ ಪ್ರತಿಭಟನೆ

ತುಮಕೂರು, ಸೆ. ೧೦- ಸಮರ್ಪಕವಾಗಿ ವೇತನ ನೀಡುವಂತೆ ಆಗ್ರಹಿಸಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ನಗರದ ಪಾಲಿಕೆ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದರು.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ಪೌರ ಕಾರ್ಮಿಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.

ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ನಮ್ಮ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ. ಕೆಲಸ ಮಾಡಿದರೂ ವೇತನ ನೀಡದಿದ್ದರೆ ನಾವು ಹೇಗೆ ಜೀವನ ನಡೆಸುವುದು ಎಂದು ಪ್ರತಿಭಟನಾನಿರತ ಪೌರ ಕಾರ್ಮಿಕರು ತಮ್ಮ ಅಳವು ತೋಡಿಕೊಂಡರು.

ಇಂದು ಕರ್ತವ್ಯಕ್ಕೆ ಹಾಜರಾಗದೆ ಪೌರಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದು, ಬಾಕಿ ಇರುವ ವೇತನ ನೀಡುವವರೆಗೂ ತಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪಾಲಿಕೆ ಅಧಿಕಾರಿಗಳು ಬಾಕಿ ಇರುವ ವೇತನವನ್ನು ಶೀಘ್ರ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನಾನಿರತ ಪೌರಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

Leave a Comment