ವೇಗದ ದೊರೆಗೆ ’ಕಂಚಿನ ವಿದಾಯ’

ಲಂಡನ್, ಆ.೬: ವೇಗದ ದೊರೆ ಉಸೇನ್ ಬೋಲ್ಟ್ ಜೈತ ಯಾತ್ರೆಗೆ ‘ಕಂಚಿನ ತೆರೆ’ ಬಿದ್ದಿದೆ. ವೃತ್ತಿ ಜೀವನದ ಅಂತಿಮ ವೈಯಕ್ತಿಕ ರೇಸ್‌ನಿಂದಾಗಿ ವಿಶ್ವದ ಗಮನ ಸೆಳೆದಿದ್ದ ಉಸೇನ್ ಬೋಲ್ಟ್, ಗ್ಯಾಟ್ಲಿನ್ ಎದುರು ಅನಿರೀಕ್ಷಿತ ಸೋಲಿನೊಂದಿಗಿನ ವಿದಾಯ ಅಭಿಮಾನಿಗಳನ್ನು ನಿರಾಸೆಗೆ ತಳ್ಳಿತು.

ಲಂಡನ್‌ನ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ತಡರಾತ್ರಿ ನಡೆದ ಐಎಎಫ್ ಪುರುಷರ ೧೦೦ ಮೀ.ಓಟದ ಫೈನಲ್‌ನಲ್ಲಿ ೯.೯೨ ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್, ಆ ಮೂಲಕ ವಿಶ್ವದಾಖಲೆ ವೀರ ಜಮೈಕಾದ ಉಸೇನ್ ಬೋಲ್ಟ್‌ಗೆ ‘ಲಾಸ್ಟ್ ಶಾಕ್’ ನೀಡಿದ್ದಾರೆ. ಅಮೆರಿಕದವರೇ ಆದ ಕ್ರಿಶ್ಚಿಯನ್ ಕೋಲ್ಮನ್ ೯.೯೪ ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

೩ ಮಿಲಿಸೆಕೆಂಡ್ ಅಂತರದಲ್ಲಿ ಹಿನ್ನಡೆ ಅನುಭವಿಸಿದ ಬೋಲ್ಟ್ ೯.೯೫ ಸೆಕೆಂಡ್‌ಗಳಲ್ಲಿ ‘ಅಂತಿಮ’ವಾಗಿ ಫಿನಿಶಿಂಗ್ ಪಾಯಿಂಟ್ ದಾಟಿದರು. ಸೆಮಿಫೈನಲ್‌ನಲ್ಲಿ ಕೋಲ್ಮನ್ ಎದುರು ಸೋತಿದ್ದ ಬೋಲ್ಟ್ ಫೈನಲ್ ರನ್‌ನಲ್ಲಿ ನಿರೀಕ್ಷಿತ ಸ್ಟಾರ್ಟ್ ಪಡೆಯುವಲ್ಲಿ ವಿಫಲರಾದರು. ಈ ಮೂಲಕ ಲಂಡನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗ್ಯಾಟ್ಲಿನ್ ತನ್ನ ಬಹುಕಾಲದ ಸೇಡನ್ನು ತೀರಿಸಿಕೊಂಡತಾಗಿದೆ. ರಿಯೋ ಒಲಿಂಪಿಕ್ ಸೇರಿದಂತೆ ಇದಕ್ಕೂ ಮೊದಲು ೫ ಬಾರಿ ಫೈನಲ್ಸ್‌ನಲ್ಲಿ ಮುಖಾಮುಖಿಯಾಗಿದ್ದಾಗಲೂ ಗ್ಯಾಟ್ಲಿನ್, ಬೋಲ್ಟ್ ಎದುರು ಸೋಲೊಪ್ಪಿಕೊಂಡಿದ್ದರು. ಆದರೆ ಬೋಲ್ಟ್ ಭಾಗವಹಿಸುತ್ತಿರುವ ಅಂತಿಮ ರೇಸ್‌ನಲ್ಲೇ ಗ್ಯಾಟ್ಲಿನ್ ತನ್ನ ಸರಣಿ ಸೋಲಿಗೆ ಸ್ಮರಣೀಯ ಸೇಡು ತೀರಿಸಿಕೊಂಡಿದ್ದಾರೆ.

೨೦೦೯ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ೯.೫೮ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದ ಬೋಲ್ಟ್ ವಿಶ್ವದಾಖಲೆ ನಿರ್ಮಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ದಾಖಲೆಯ ೧೧ ವಿಶ್ವ ಅಥ್ಲೆಟಿಕ್ಸ್ ಹಾಗೂ ೮ ಒಲಿಂಪಿಕ್ಸ್ ಪದಕಗಳನ್ನು ಬೋಲ್ಟ್ ಮುಡಿಗೇರಿಸಿಕೊಂಡಿದ್ದಾರೆ. ಬೋಲ್ಟ್ ಕೊನೆಯದಾಗಿ ೪ ೧೦೦ ಮೀ ಖಟರ್ ರಿಲೇಯಲ್ಲಿ ಜಮೈಕ ತಂಡವನ್ನು ಪ್ರತಿನಿಧಿಸುತ್ತಿದ್ದು ರಿಲೇ ಹೀಟ್ಸ್ ಶುಕ್ರವಾರ ಹಾಗೂ ಫೈನಲ್ ಶನಿವಾರ ನಡೆಯಲಿದೆ.

Leave a Comment