ವೇಗದೂತ ಧಾವಂತಕ್ಕೆ ಯುವಕ ಬಲಿ ಅಸೈಗೋಳಿ ಬಳಿ ನಡೆದ ಘಟನೆ

ಮಂಗಳೂರು, ಜೂ.೧೩- ಬಿಸಿ ರೋಡ್ ಕಡೆಯಿಂದ ಬರುತ್ತಿದ್ದ ‘ವೇಗದೂತ’ ಬಸ್ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಗರದ ಹೊರವಲಯದ ಅಸೈಗೋಳಿ ಬಳಿ ನಡೆದಿದೆ. ಮೃತರನ್ನು ಪಜೀರ್ ನಿವಾಸಿ ಹರ್ಷಿತ್ ಶೆಟ್ಟಿ(೨೪) ಎಂದು ಹೆಸರಿಸಲಾಗಿದೆ.
ಅಸೈಗೋಳಿ ಕಡೆಯಿಂದ ಬೈಕ್‌ನಲ್ಲಿ ಹರ್ಷಿತ್ ಮಂಗಳೂರಿಗೆ ಬರುತ್ತಿದ್ದ ವೇಳೆ ಜಂಕ್ಷನ್ ಸಮೀಪ ‘ಭ್ರಮರಾಂಬ’ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಹರ್ಷಿತ್ ಶೆಟ್ಟಿಯ ದೇಹದ ಮೇಲೆ ಚಲಿಸಿದ್ದು ಹೆಲ್ಮೆಟ್ ಒಡೆದು ದೇಹ ಸಂಪೂರ್ಣ ಛಿದ್ರಗೊಂಡಿದೆ. ಬಸ್ ಚಾಲಕ ಕೆಲವು ಮೀಟರ್ ದೂರ ಬಸ್ಸನ್ನು ಚಲಾಯಿಸಿದ್ದು ಬಳಿಕ ನಿಲ್ಲಿಸಿದ್ದಾನೆ. ಸ್ಥಳಕ್ಕೆ ಕೊಣಾಜೆ ಠಾಣಾ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Comment