ವೆಂಕಟೇಶ್ ಪ್ರಸಾದ್ ಗೆ ಬಿಜೆಪಿ ಟಿಕೆಟ್ ಗಾಗಿ ಸತತ ಪ್ರಯತ್ನ

ಬಳ್ಳಾರಿ, ಮಾ.14: ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಟೆಕೆಟ್ ನ್ನು ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಪಡೆಯುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡಿರುವ ಶಾಸಕ ನಾಗೇಂದ್ರ ಅವರು, ತಮ್ಮ ಹಿಂದಿನ ಪಕ್ಷ ಬಿಜೆಪಿಯಲ್ಲಿ ಮತ್ತೆ ನೆಲೆ ಕಂಡುಕೊಳ್ಳಲು ಸೋಹದರ ವೆಂಕಟೇಶ್ ಪ್ರಸಾದ್ ಗೆ ಎಂ.ಪಿ. ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.

ಬಳ್ಳಾರಿಗೆ ಯಾರು ಅಭ್ಯರ್ಥಿಯಾಗಬೇಕು ಎಂಬುದು ಬಹುತೇಕ ಶ್ರೀರಾಮುಲು ಅವರ ನಿರ್ಧಾರದಲ್ಲಿದೆ. ಅದಕ್ಕಾಗಿ ನಾಗೇಂದ್ರ ಅವರು ನಿನ್ನೆ ದಿನ ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಭೇಟಿ ಮಾಡಿ ಟಿಕೆಟ್ ಗಾಗಿ ಪ್ರಯತ್ನಿಸಿದ್ದಾರಂತೆ. ಅಲ್ಲದೇ ಈ ಕುರಿತು ಶ್ರೀರಾಮುಲು ಅವರ ಜೊತೆ ದೂರವಾಣಿಯಲ್ಲಿ ಸಂಪರ್ಕಿಸಿದ್ದಾರೆಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷ ತಮಗೆ ವಿಧಾನಸಭಾ ಚುನಾವಣೆ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಸಂತೋಷ್ ಲಾಡ್ ಅವರುಗಳು ನೀವು ಗೆದ್ದು ಬಂದರೆ ಪಕ್ಷದಿಂದ ಉನ್ನತ ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸಚಿವ ಸ್ಥಾನ ನೀಡಲಿಲ್ಲ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಿಲ್ಲ. ಸಹೋದರನಿಗೆ ಎಂ.ಪಿ.ಟಿಕೆಟ್ ಸಹ ನೀಡದೆ ಹೊರಗಿನಿಂದ ಬಂದಿರುವ ವಿ.ಎಸ್.ಉಗ್ರಪ್ಪನನ್ನು ಕರೆತಂದು ಎಂ.ಪಿ. ಮಾಡಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರ ಮೇಲೆ ನಾಗೇಂದ್ರ ಅವರು ಸೇಡು ತೇರಿಸಿಕೊಳ್ಳುವ ತವಕದಲ್ಲಿದ್ದಾರೆನ್ನಲಾಗಿದೆ.

ಅದಕ್ಕಾಗಿ ಬಿಜೆಪಿಯಿಂದ ಎಂ.ಪಿ.ಟಿಕೆಟ್ ನ್ನು ಸಹೋದರ ವೆಂಕಟೇಶ್ ಪ್ರಸಾದ್ ಗೆ ಪಡೆಯುವ ಪ್ರಯತ್ನಕ್ಕೆ ನಾಗೇಂದ್ರ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಅಂತಿಮ ನಿರ್ಧಾರವಾಗಲಿದೆ.
ನಾಗೇಂದ್ರ ಅವರ ಬೇಡಿಕೆಗೆ ಶ್ರೀರಾಮುಲು, ರೆಡ್ಡಿ ಗುಂಪು ಅವಕಾಶ ಕೊಡುವುದೇ ಎಂಬುದನ್ನು ಕಾದು ನೋಡಬೇಕಿದೆ.

Leave a Comment