ವೃದ್ಧ ತಂದೆ-ತಾಯಿಯನ್ನು ಮನೆಯಿಂದ ಹೊರದಬ್ಬಿದ ಮಕ್ಕಳು

ಪೊಲೀಸರಿಗೆ ಕ್ರಮ ಕೈಗೊಳ್ಳಲು ತಿಳಿಸಿದ ಉಪವಿಭಾಗಾಧಿಕಾರಿ
ಮೈಸೂರು. ಜು.17: ಮುಪ್ಪಿನಲ್ಲಿ ಆಸರೆಯಾಗಬೇಕಾದ ಮಕ್ಕಳೇ ವೃದ್ಧ ತಂದೆ-ತಾಯಿಯನ್ನು ಮನೆಯಿಂದ ಹೊರದಬ್ಬಿ ಮನೆಯನ್ನು ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದ್ದು, ವೃದ್ಧ ದಂಪತಿ ವಾಸಿಸಲು ಅವಕಾಶ ಹಾಗೂ ಮಕ್ಕಳಿಂದ ಭದ್ರತೆ ನೀಡುವಂತೆ ಕೋರಿ ನಿರ್ವಹಣಾ ಮಂಡಳಿ ಮತ್ತು ಉಪವಿಭಾಗೀಯ ದಂಡಾಧಿಕಾರಿಗಳ ಕಾರ್ಯಾಲಯದ ಉಪವಿಭಾಗಾಧಿಕಾರಿಗಳಿಗೆ ವೃದ್ಧ ದಂಪತಿ ದೂರು ನೀಡಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ಸಂಬಂಧಿಸಿದ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಅಧೀಕ್ಷಕರಿಗೆ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಮಂಡಿಮೊಹಲ್ಲಾ ನಿವಾಸಿಗಳಾದ ಕೆ.ನಜೀರ್ ಅಹ್ಮದ್ ಖಾನ್ ಬಿನ್ ಖಾಸಿಂ ಖಾನ್ ಮತ್ತು ಸಬಿಹಾ ಬಾನು ಕೋಂ ಕೆ.ನಜೀರ್ ಅಹ್ಮದ್ ಖಾನ್ ಇವರು ತಮ್ಮ ಮಕ್ಕಳಾದ ನಸಿರ್ ಖಾನ್, ಆಯಬ್ ಖಾನ್, ಯೂಸಫ್ ಖಾನ್, ಖಾಸಿಂ ಖಾನ್ ಅಜ್ಮಲ್ ಖಾನ್ ವಿರುದ್ಧ ತಂದೆತಾಯಿಯರ ಮತ್ತು ಹಿರಿಯ ನಾಗರೀಕರ ಪಾಲನೆ-ಪೋಷಣೆ ಮತ್ತು ಶ್ರೇಯಾಭಿವೃದ್ಧಿ ಅಧಿನಿಯಮ 2007ರ ಕಲಂ 22,23 ಹಾಗೂ 24ರಡಿ ದೂರು ನೀಡಿದ್ದಾರೆ.
ಕೆ.ನಜೀರ್ ಅಹ್ಮದ್ ಖಾನ್ ಅವರಿಗೆ 82 ವರ್ಷ ಮತ್ತು ಸಬಿಹಾ ಬಾನು ಇವರಿಗೆ 62ವರ್ಷ ವಯಸ್ಸಾಗಿದೆ. ಎಲ್ಲ ಮಕ್ಕಳಿಗೂ ಇವರು ವಿದ್ಯಾಭ್ಯಾಸ ಮದುವೆ, ಮುಂಜಿಗಳನ್ನು ನೆರವೇರಿಸಿ ಮಕ್ಕಳು ಸ್ವತಂತ್ರವಾಗಿ ಬದುಕಲು ಕಲಿಸಿಕೊಟ್ಟಿರುತ್ತಾರೆ. ಆದರೆ ಮುಪ್ಪಿನಲ್ಲಿ ಕೈಹಿಡಯಬೇಕಾದ ಮಕ್ಕಳು ವೃದ್ಧ ತಂದೆತಾಯಿಯರನ್ನೇ ಮನೆಯಿಂದ ಹೊರಹಾಕಿದ್ದು, ತಮಗೆ ವಾಸಿಸಲು ಸ್ಥಳವಿಲ್ಲ, ಭದ್ರತೆಯಿಲ್ಲ, ನಮಗೆ ಮನೆ ನೀಡಿ, ಭದ್ರತೆ ಒದಗಿಸಿ ಎಂದು ಉಪವಿಭಾಗಾಧಿಕಾರಿಯವರ ಮೊರೆ ಹೋಗಿದ್ದಾರೆ.
ಹಿರಿಯ ನಾಗರೀಕರ ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯಲ್ಲಿ ತಮಗೆ ಸೇರಿದ ಮೈಸೂರು ನಗರ ಮಂಡಿ ಮೊಹಲ್ಲಾ, ಕಳಮ್ಮನ ಗುಡಿ ರಸ್ತೆ ನಂ.3165 ಹೊಸ ನಂ.ಎಂ.316ರ ಸ್ವತ್ತನ್ನು ಅವರ ಮಕ್ಕಳು ಅಕ್ರಮವಾಗಿ ವಶಪಡಿಸಿಕೊಂಡಿದ್ದು ಆ ಸ್ವತ್ತಿನಲ್ಲಿ ತಮಗೆ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಹಾಗೂ ಮಕ್ಕಳಿಂದ ಸೂಕ್ತ ಭದ್ರತೆ ಒದಗಿಸುವಂತೆ ಕೋರಿದ್ದಾರೆ, ಪಾಲಕರ ಪೋಷಣೆ ಮತ್ತು ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣೆ ನಿಯಮಗಳು 2009 ನಿಯಮ 21 ರಲ್ಲಿ ಪಾಲಕರ ಮತ್ತು ಹಿರಿಯ ನಾಗರೀಕರ ಜೀವ ಮತ್ತು ಆಸ್ತಿ ರಕ್ಷಣೆಗೆ ಕ್ರಮ ವಹಿಸಲು ಸಂಬಂಧಿಸಿದ ಪೊಲೀಸ್ ಆಯುಕ್ತರು/ಪೊಲೀಸ್ ಅಧಿಕ್ಷಕರಿಗೆ ನಿರ್ದೇಶನ ನೀಡಿದ್ದು, ನಿಯಮಾನುಸಾರ ಪರಿಶೀಲಿಸಿ ತುರ್ತು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

Leave a Comment