ವೃತ್ತಿಯನ್ನು ಪ್ರೀತಿಸಿ

ಹೊನ್ನಾಳಿ.ಆ.6; ಸರಕಾರಿ ನೌಕರ ತನ್ನ ಮೂಲ ವೃತ್ತಿಯನ್ನು ಪ್ರೀತಿಸಿ ವೃತ್ತಿಯಲ್ಲಿ ತೃಪ್ತಿ ಕಾಣಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎನ್.ಎಸ್. ಕುಮಾರ್ ಹೇಳಿದರು.
ಬಿಇಒ, ಬಿಆರ್‍ಸಿ ಕಚೇರಿ ಮತ್ತು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಂಯಕ್ತಾಶ್ರಯದಲ್ಲಿ ಇಲ್ಲಿನ ಗುರುಭವನದಲ್ಲಿ ಹಮ್ಮಿಕೊಂಡಿದ್ದ ನಿವೃತ್ತರಿಗೆ ಸನ್ಮಾನ ಹಾಗೂ ವರ್ಗಾವಣೆಗೊಂಡ ನೌಕರರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರಿಗಳಾದವರು ಸೌಜನ್ಯದಿಂದ ತಮ್ಮ ಕೆಳ ವರ್ಗದ ನೌಕರರಿಂದ ಕೆಲಸ-ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ಅಧಿಕಾರದ ದರ್ಪ ತೋರಿ ಎಂದೂ ಅನ್ಯಾಯ ಎಸಗಬಾರದು.
ಅಧಿಕಾರಿಗಳು ತಮ್ಮ ಕೈಯಲ್ಲಿ ಪೆನ್ನು ಇದೆ ಎಂದು ಅಹಂಕಾರದಿಂದ ವರ್ತಿಸಬಾರದು. ನೌಕರರ ಹೊಟ್ಟೆ ಮೇಲೆ ಹೊಡೆಯಬಾರದು. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಶಹಬ್ಬಾಸ್‍ಗಿರಿ ನೀಡಬೇಕು ಎಂದು ಹೇಳಿದರು.
ನಾನು ಓದಿದ ಪ್ರೌಢಶಾಲೆ ಸಾಸ್ವೆಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ 1884ರಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ಎಇಒ, ಬಿಇಒ, ಡಿಡಿಪಿಐ, ಜೆಡಿಪಿಐ ಕೊನೆಗೆ ಡಿಪಿಐ ಹುದ್ದೆ ಅಲಂಕರಿಸಿ ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಿದ್ದೇನೆ. ಇದಕ್ಕೆಲ್ಲಾ ನನ್ನ ಪೋಷಕರು ಮಾಡಿದ ಪುಣ್ಯದ ಕಾಯಕ ಹಾಗೂ ತಾಲೂಕಿನ ಶಿಕ್ಷಕರ ಶುಭ ಹಾರೈಕೆ ಕಾರಣ ಎಂಬುದಾಗಿ ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಿ.ಕೆ. ಶಿವಕುಮಾರ್ ಮಾತನಾಡಿ, ವ್ಯಕ್ತಿತ್ವದ ನಿರ್ಮಾಣದಲ್ಲಿ ಶಿಕ್ಷಣ ಬಹು ದೊಡ್ಡ ಪಾತ್ರ ವಹಿಸುತ್ತದೆ ಎನ್ನಲಿಕ್ಕೆ ಈಚೆಗೆ ನಿವೃತ್ತಿ ಹೊಂದಿದ ನಿರ್ದೇಶಕ ಎನ್.ಎಸ್. ಕುಮಾರ್ ಹಾಗೂ ನಾನು ಜೀವಂತ ನಿದರ್ಶನ. ನಾವು ಸರಕಾರಿ ಶಾಲೆಗಳಲ್ಲಿ ಓದಿ, ಉನ್ನತ ಹುದ್ದೆಗಳನ್ನು ಅಲಂಕರಿಸಿ ಇಂದು ನಿವೃತ್ತರಾಗಿದ್ದೇವೆ ಎಂದು ಹೇಳಿದರು.
ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ ಹಾಗೂ ಪವಿತ್ರವಾದುದು. ಶಿಕ್ಷಕರ ಘನತೆ ಹೆಚ್ಚುವುದು ತಮ್ಮ ಉತ್ತಮ ಬೋಧನೆಯಿಂದ ಮಾತ್ರ. ಇದನ್ನು ಅರಿತು ಶಿಕ್ಷಕರು ಪಾಠ-ಪ್ರವಚನಗಳಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ಬಿಇಒ ಜಿ.ಇ. ರಾಜೀವ್, ಬಿಆರ್‍ಸಿ ಎಚ್.ಎಸ್. ಉಮಾಶಂಕರ್, ವರ್ಗಾವಣೆಗೊಂಡ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ಸಿ. ವಿರೂಪಾಕ್ಷಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ. ಪುರುಷೋತ್ತಮ್, ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರಪ್ಪ, ಶಿಕ್ಷಕ ಕೆ.ಎಂ. ರಾಜಶೇಖರಯ್ಯ ಮಾತನಾಡಿದರು.
ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ, ದೈಹಿಕ ಶಿಕ್ಷಣಾಧಿಕಾರಿ ರವಿ ಗಾಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವೇದಮೂರ್ತಿ, ಸಹ ಕಾರ್ಯದರ್ಶಿ ಕೆ.ಎಂ. ಕರಿಬಸಯ್ಯ, ಮುಖ್ಯ ಶಿಕ್ಷಕ ಸೋಮಶೇಖರ್ ಇತರರು ಉಪಸ್ಥಿತರಿದ್ದರು.
ನಿವೃತ್ತಿ ಹೊಂದಿದ ಡಿಪಿಐ ಎನ್.ಎಸ್. ಕುಮಾರ್, ಜೆಡಿಪಿಐ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ವರ್ಗಾವಣೆಗೊಂಡ ಡಯಟ್ ಉಪ ಪ್ರಾಂಶುಪಾಲ ಕೆ.ಸಿ. ಮಲ್ಲಿಕಾರ್ಜುನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ಸಿ. ವಿರೂಪಾಕ್ಷಪ್ಪ ಅವರನ್ನು ಬೀಳ್ಕೊಡಲಾಯಿತು.

 

Leave a Comment