ವೀರಶೈವ ಮಹಾಸಭಾಕ್ಕೆ ಸೆಡ್ಡು ವಿಶ್ವಲಿಂಗಾಯತ ಪರಿಷತ್ ಉದಯ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ. ೧೩- ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ವೀರಶೈವ ಲಿಂಗಾಯತರು ನಡೆಸುತ್ತಿರುವ ಜಟಾಪಟಿಯ ಮಧ್ಯೆ ವಿಶ್ವಲಿಂಗಾಯತ ಪರಿಷತ್‌ನ್ನು ಹುಟ್ಟುಹಾಕಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳದೆ ತನ್ನ ನಿಲುವಿಗೆ ಅಂಟಿಕೊಂಡಿರುವುದರಿಂದ ಇದೇ ತಿಂಗಳ 23 ರಂದು `ವಿಶ್ವ ಲಿಂಗಾಯತ ಪರಿಷತ್'(ವಿ.ಎಲ್.ಪಿ) ಅಸ್ಥಿತ್ವಕ್ಕೆ ಬರಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಅವರು ಇಂದು ಇಲ್ಲಿ ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭವಾಗುತ್ತಿದ್ದಂತೆ ನಾವು ವೀರಶೈವರು ಎಂದು ಹೇಳಿಕೊಳ್ಳುತ್ತಿದ್ದ ಎಷ್ಟೋ ಮಂದಿ ತಮ್ಮ ಜನನ ಪ್ರಮಾಣಪತ್ರವನ್ನು ತೆಗೆದು ನೋಡಿ ನಾವು ವೀರಶೈವರಲ್ಲ, ಲಿಂಗಾಯತರು ಎಂದು ಗೊತ್ತಾಗಿದೆ. ಮಹಾಸಾಭಾದ ಅಧ್ಯಕ್ಷರು ನಾವು ಕುಸ್ತಿ ನೋಡುತ್ತಿದ್ದೇವೆ ಎಂದು ಮೋಜಿನಿಂದ ಹೇಳಿದ್ದಾರೆ. ಮನೆಯ ಯಜಮಾನ ಇಂತಹ ಮಾತುಗಳನ್ನಾಡಬಾರದು. ಜವಾಬ್ದಾರಿಯಿಂದ ವರ್ತಿಸಬೇಕು. ನಾವು ಸಹನೆಯಿಂದ ಕಾದು ನೋಡಿದ್ದೇವೆ. ಜ. 23 ರಂದು ಮಠಾಧೀಶರು, ಧಾರ್ಮಿಕ ತಜ್ಞರು, ಯುವ ಮುಖಂಡರು ಎಲ್ಲರನ್ನೂ ಒಟ್ಟುಗೂಡಿಸಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾವೇಶ ನಡೆಸಲಿದ್ದೇವೆ. ಚಿಂತನ-ಮಂಥನ ಬಳಿಕ ಅಂದೇ ವಿಶ್ವ ಲಿಂಗಾಯತ ಪರಿಷತ್ ಅಸ್ಥಿತ್ವಕ್ಕೆ ಬರಲಿದೆ. ವಿ.ಎಲ್.ಪಿ.ಗೆ ಬಸವಣ್ಣ ಅವರನ್ನೊಳಗೊಂಡ ಲಾಂಛನ ಬರಲಿದೆ.

-ಡಾ. ಸಿ. ಜಯಣ್ಣ

ವೀರಶೈವ ಮತ್ತು ಲಿಂಗಾಯತ ವಿವಾದ ಕುರಿತಂತೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ವೀರಶೈವ ಮಹಾಸಭಾ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಅನಿವಾರ್ಯವಾಗಿ ವಿಶ್ವಲಿಂಗಾಯತ ಪರಿಷತ್‌ನ್ನು ಹುಟ್ಟು ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿ.ಎಲ್.ಪಿ ರಚನೆ ಸಂಬಂಧ ಈಗಾಗಲೇ ಕರಡುಪ್ರತಿ ಸಿದ್ಧವಾಗಿದೆ. ಇದನ್ನು ಅಂತಿಮಗೊಳಿಸಲು ಇದೇ ತಿಂಗಳ 23 ರಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಧಾರ್ಮಿಕ ತಜ್ಞರು, ಮಠಾಧಿಪತಿಗಳು ಹಾಗೂ ಎಲ್ಲರನ್ನೊಳಗೊಂಡಂತೆ ಸಮಾವೇಶ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಈ ತಿಂಗಳೊಳಗಾಗಿ ವಿ.ಎಲ್.ಪಿಗೆ ಸದಸ್ಯರ ನೋಂದಣಿ ಕಾರ್ಯ ಆರಂಭವಾಗಲಿದೆ. ಜಿಲ್ಲೆ, ತಾಲ್ಲೂಕು, ನಗರ, ಪಟ್ಟಣಗಳಲ್ಲಿ ಸಾವಿರಗಟ್ಟಲೆ ಲಿಂಗಾಯತ ಕಾರ್ಯಕರ್ತರಿದ್ದು, ಅವರ ಮೂಲಕ ಸದಸ್ಯರ ನೋಂದಣಿ ಕಾರ್ಯ ಆರಂಭವಾಗಲಿದೆ.  ವಿ.ಎಲ್.ಪಿ ರಚನೆ ಅನಿವಾರ್ಯ, ಇದು ಸಂತಸಕರ ನಿರ್ಧಾರವಲ್ಲ. ಆದರೂ ಈ ತೀರ್ಮಾನವನ್ನು ಸಾಕಷ್ಟು ಆಲೋಚನೆ ನಡೆಸಿಯೇ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಶ್ವಲಿಂಗಾಯತ ಪರಿಷತ್‌, ವೀರಶೈವ ಮಹಾಸಭಾ ರಚನೆಗಿಂತ ವಿಶಾಲವಾಗಿದೆ. ಇದರ ಕಾರ್ಯನಿರ್ವಹಣೆ ಕೂಡ ಭಿನ್ನವಾಗಿರುತ್ತದೆ. ಬಸವ ಸೇನೆಯು ವಿ.ಎಲ್.ಪಿ.ಯ ಯುವ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಲ್ಲಿರುವ ಲಿಂಗಾಯತ ಧರ್ಮದ ವಕೀಲರು, ವೈದ್ಯರು, ವಿಚಾರವಂತರು, ನ್ಯಾಯಾಧೀಶರು, ಅಲ್ಲದೇ ವೃತ್ತಿನಿರತರ ವಿಶೇಷ ಘಟಕಗಳನ್ನು ರಚಿಸಲಿದ್ದೇವೆ. ಆದರೆ, ವೀರಶೈವ ಮಹಾಸಭಾದ ಸಂವಿಧಾನದಲ್ಲಿ ಇಂತಹ ಪ್ರತ್ಯೇಕ ಘಟಕಗಳಿಗೆ ಅವಕಾಶವಿಲ್ಲ ಎಂದರು.

113 ವರ್ಷಗಳ ಇಂತಿಹಾಸ ಹೊಂದಿರುವ ವೀರಶೈವ ಮಹಾಸಭಾ ಶೈಕ್ಷಣಿಕ ವಲಯದಲ್ಲಿ ಯಾವುದೇ ಮಹತ್ಕಾರ್ಯ ಮಾಡಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಲ್ಲ. ಆದರೆ, ವಿ.ಎಲ್.ಪಿ ಮೂಲಕ ಹಿಂದುಳಿದ ಸಮಾಜದಲ್ಲಿರುವ ಲಿಂಗಾಯತರನ್ನು ಅಕ್ಷರಸ್ಥರನ್ನಾಗಿಸಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಿದ್ದೇವೆ ಎಂದು ತಿಳಿಸಿದರು.

ತಜ್ಞರ ಸಮಿತಿಯು ತನ್ನ ನಿರ್ಧಾರವನ್ನು ಪ್ರಕಟಿಸಲು ಆರು ತಿಂಗಳು ಮುಂದೂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾಮದಾರ್ ಅವರು, ಆರು ತಿಂಗಳು, ಆರು ವರ್ಷಗಳು ತೆಗೆದುಕೊಳ್ಳಲಿ ವರದಿ ಬರುವವರೆಗೂ ನಾವು ಕಾಯುವುದಿಲ್ಲ. ನಮ್ಮ ಗುರಿ ಲಿಂಗಾಯತ ಸ್ವತಂತ್ರ ಧರ್ಮವಾಗಿರಬೇಕು. ತಜ್ಞರ ಸಮಿತಿ ಮುಂದೆ ಯಾವುದೇ ಅರ್ಜಿಗಳನ್ನು ಸಲ್ಲಿಸುವ ಅಗತ್ಯವೂ ಇಲ್ಲ. ತಮ್ಮ ಹೇಳಿಕೆಗಳೆಲ್ಲವೂ ಈಗಾಗಲೇ ತಜ್ಞರ ಸಮಿತಿ ಮುಂದೆ ಇದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ಮಾಹಿತಿಗಳನ್ನು ಕೊಡಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಸಿ. ಜಯಣ್ಣ, ಜಿ.ಬಿ. ಪಾಟೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment