ವೀರಶೈವ ಕಲ್ಯಾಣ ಮಂಟಪ ಮದುವೆ ಸಮಾರಂಭ

ಜಿಲ್ಲಾಡಳಿತ ಕಛೇರಿ ಆವರಣ ಪಾರ್ಕಿಂಗ್ ಸ್ಥಳ
ರಾಯಚೂರು.ಜು.11- ಜಿಲ್ಲಾಡಳಿತ ಕಛೇರಿ ಆವರಣ ಖಾಸಗಿ ಮದುವೆ ಸಮಾರಂಭಕ್ಕೆ ಬರುವ ವಾಹನ ನಿಲುಗಡೆಯ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ.
ವೀರಶೈವ ಕಲ್ಯಾಣ ಮಂಟಪದ ಮದುವೆ ಸಮಾರಂಭಕ್ಕೆ ಆಗಮಿಸುವ ವಾಹನಗಳ ನಿಲುಗಡೆ ಯಾವುದೇ ಸ್ಥಳಾವಕಾಶ ಮಾಡಿಕೊಳ್ಳದಿರುವುದರಿಂದ ಕಲ್ಯಾಣ ಮಂಟಪ ಬಾಡಿಗೆ ಪಡೆದ ಕಾರ್ಯಕ್ರಮ ನಿರ್ವಾಹಕರು ವಾಹನಗಳನ್ನು ಎಲ್ಲೆಂದರಲ್ಲಿ ರಸ್ತೆಯಲ್ಲಿ ನಿಲ್ಲಿಸುವ ಮೂಲಕ ಸಂಚಾರಕ್ಕೆ ತೀವ್ರ ಅಡ್ಡಿಯಾಗುವುದು ಸಾಮಾನ್ಯ. ಈ ಪ್ರಕರಣ ಒಂದೆಡೆಯಾದರೇ, ಮತ್ತೊಂದೆಡೆ ಜಿಲ್ಲಾ ಅಧಿಕಾರಿಗಳ ಕಛೇರಿ ಆವರಣವನ್ನೇ ಪಾರ್ಕಿಂಗ್ ಪ್ರದೇಶವಾಗಿ ಬಳಕೆ ಮಾಡಲಾಗುತ್ತಿದೆ.
ಜಿಲ್ಲಾಡಳಿತ ಕಛೇರಿ ಆವರಣದಲ್ಲಿ ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ದ ಹೋರಾಟಗಾರರನ್ನು ಇಲ್ಲಿಂದ ಹೊರ ಹಾಕಿದ ಜಿಲ್ಲಾಡಳಿತ ಈಗ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ಪ್ರದೇಶ ಸೌಕರ್ಯ ಒದಗಿಸಿದಂತಾಗಿದೆ. ಜಿಲ್ಲಾಡಳಿತ ಕಛೇರಿಗೆ ಎರಡು ಪ್ರಮುಖ ಗೇಟ್‌ಗಳಿವೆ. ಎರಡು ಕಡೆ ಭದ್ರತಾ ವ್ಯವಸ್ಥೆಯಿದ್ದರೂ, ಖಾಸಗಿ ವಾಹನಗಳು ಪಾರ್ಕಿಂಗ್‌ಗೆ ಜಿಲ್ಲಾಡಳಿತ ಕಛೇರಿ ಬಳಸಿಕೊಳ್ಳಲಾಗುತ್ತಿದೆ.
ಇಂದು ಸಾರಿಗೆ ಇಲಾಖೆಯ ಬಸ್‌ವೊಂದನ್ನು ಜಿಲ್ಲಾಡಳಿಕ ಕಛೇರಿ ಆವರಣದಲ್ಲಿ ನಿಲ್ಲಿಸುವ ಮೂಲಕ ವೀರಶೈವ ಕಲ್ಯಾಣ ಮಂಟಪಕ್ಕೆ ಬರುವ ಮದುವೆ ಸಮಾರಂಭ ವಾಹನಗಳಿಗೆ ಜಿಲ್ಲಾಡಳಿತ ಆವರಣ ಪಾರ್ಕಿಂಗ್‌ಗಾಗಿ ಮಾರ್ಪಟ್ಟಂತಾಗಿದೆ. ನಗರದ ಮುಖ್ಯ ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪಕ್ಕೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯಿಲ್ಲದಿರುವುದರಿಂದ ಮದುವೆ ಸಮಾರಂಭ ಸಂದರ್ಭದಲ್ಲಿ ವೀರಶೈವ ರಸ್ತೆ ಸಂಪೂರ್ಣ ವಾಹನ ಪಾರ್ಕಿಂಗ್ ಪ್ರದೇಶವಾಗಿ ಮಾರ್ಪಟ್ಟು ಈ ರಸ್ತೆಯಲ್ಲಿ ಓಡಾಡುವ ಜನರು ಪರದಾಡುವಂತಾಗಿರುತ್ತದೆ.
ಕಲ್ಯಾಣ ಮಂಟಪ ಬಾಡಿಗೆ ನೀಡುವ ಆಡಳಿತ ಮಂಡಳಿ ಕನಿಷ್ಟ ನೂರಾರು ಸಂಖ್ಯೆಯಲ್ಲಿರುವ ವಾಹನಗಳಿಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಒದಗಿಸುವತ್ತ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆಯೂ ಕಟ್ಟುನಿಟ್ಟಿನ ಸೂಚನೆ ಜಾರಿಗೊಳಿಸಿ, ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆದೇಶಿಸದಿರುವುದು ಜಿಲ್ಲಾಡಳಿತ ಕಛೇರಿ ಈಗ ಪಾರ್ಕಿಂಗ್ ಪ್ರದೇಶವಾಗುವಂತೆ ಮಾಡಿದೆ.

Leave a Comment