ವೀಕೆಂಡ್ ವಿತ್ ರಮೇಶ್ ಶೋನ ತೆರೆಮರೆಯ ಸಾಧಕರು

ನಿರ್ದೇಶಕ ಅನಿಲ್ ಶ್ರಮಕ್ಕೆ ಮೆಚ್ಚುಗೆ

ವಾರಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಪುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಾಧಕರ ಸೀಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಕೂರಿಸಿ ಅವರ ಜೀವನ ಅನಾವರಣ ಮಾಡುವುದೇ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ಅಂತಹ ಸಾಧನೆಗೆ ಕೈಹಾಕಿದ್ದ ನಿರ್ದೇಶಕ ಅನಿಲ್ ಕುಮಾರ್.ಜೆ ಅವರು 4ನೇ ಆವೃತ್ತಿಯಲ್ಲಿ ಯಶಸ್ವಿಯಾಗಿ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರದವರಿಗೆ ಮಾತ್ರ ಸೀಮಿತವಾಗಿದೆ ಎಂಬ ಆರೋಪ ಹೊತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ಆವೃತ್ತಿಗೆ ಹೊಸ ವಿಭಿನ್ನ ರೂಪ ನೀಡಿ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿದ್ದಾರೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋನ ಹೊಣೆ ಹೋರುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹ ಶೋನ ನಿರ್ದೇಶನ ಮಾಡುವುದೆಂದರೆ ದೊಡ್ಡ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ತಾನು ಈ ಶೋನ ನಿರ್ದೇಶಕ ಎಂದು ಅವರು ಎಲ್ಲಿಯೂ ಪ್ರಚಾರ ಮಾಡದ 29 ವರ್ಷದ ಅನಿಲ್ ಕುಮಾರ್ ಜೆ. ಅವರ ಸರಳತೆಗೆ ಹಿಡಿದ ಕೈಗನ್ನಡಿ. ಸಣ್ಣ ವಯಸ್ಸಿನಲ್ಲಿಯೇ ಗಮನ ಸೆಳೆದಿರುವ ಅನಿಲ್‌ಗೆ ಒಂದಲ್ಲ ಒಂದು ದಿನ ಈ ಸೀಟು ಕೂಡ ನಿನಗಾಗಿಯೇ ಕಾಯುತ್ತಿರುತ್ತದೆ ಎಂದು ಸ್ವತಃ ರಮೇಶ್ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

*ನಿಮ್ಮ ತಂಡದ ಬಗ್ಗೆ ಹೇಳಿ?

ಶರಣ್ಯ.ಟಿ, ಸತೀಶ್, ಪ್ರದ್ಯುಮ್ನಾ, ಆನಂದ್, ಲೋಕೇಶ್, ನಾಗೇಂದ್ರ, ಅಕ್ಷಯ್, ಅಕ್ಷತಾ, ರಶ್ಮಿ, ಕುಮಾರ್, ಆಶಾ, ಹರ್ಷಾ, ಮಧು, ದಿವ್ಯಾ, ಶ್ರೀಕಾಂತ್, ಘೋಷಾಲ್, ಪ್ರವೀಣ್, ಕಟೀಲ್, ದಿಲೀಪ್ ಸೇರಿ ಒಟ್ಟು ೧೮ ಮಂದಿ ನಾವು ತಂಡದಲ್ಲಿದ್ದೇವೆ. ಮೊದಲಿಗೆ ನಾವು ಸಾಧಕರ ಪಟ್ಟಿ ಸಿದ್ದ ಮಾಡಿಕೊಂಡು, ನಂತರ ಅವರಲ್ಲಿ ಚಿತ್ರೀಕರಣಕ್ಕಾಗಿ ಒಂದು ದಿನ 5 ಗಂಟೆ ಸಮಯ ನೀಡುವಂತೆ ಕೇಳುತ್ತೇವೆ. ಅವರು ಒಪ್ಪಿದಲ್ಲಿ ನಮ್ಮ ತಂಡದಲ್ಲಿ ಕೆಲಸ ಶುರುವಾಗುತ್ತದೆ. ಅವರ ಅಪರೂಪ ಫೋಟೋ, ಆತ್ಮೀಯರ ಬಗ್ಗೆ ಮಾಹಿತಿ ಕಲೆ ಹಾಕಿ, ತುಂಬಾ ಆಳಕ್ಕೆ ಹೋಗಿ ಸಂಶೋಧನೆ ಮಾಡಲಾಗುತ್ತದೆ. ಸಂಚಿಕೆಯನ್ನು ಒಂದು ಹಂತಕ್ಕೆ ತರುವಷ್ಟರಲ್ಲಿ 10ರಿಂದ15 ದಿನವೇ ಆಗಲಿದೆ. ನಮ್ಮ ತಂಡದಲ್ಲಿರುವ ನಾಲ್ಕು ಹೆಣ್ಣು ಮಕ್ಕಳು ಸಹ ಗಂಡು ಹಡುಗರಂತೆ ಕೆಲಸ ಮಾಡುತ್ತಾರೆ. ನಾವೆಲ್ಲಾ ಸುಮಾರು 4-5 ತಿಂಗಳು ಮನೆ ಮಠ ಬಿಟ್ಟು ಹಗಲು ರಾತ್ರಿ ಎನ್ನದೇ ಸಾಧಕರ ಬಗ್ಗೆ ಸಂಶೋಧನೆ ಮಾಡಲು ಮುಂದಾಗುತ್ತೇವೆ. ಸಂಚಿಕೆ ಪ್ರಸಾರವಾಗುವರೆಗೂ ಒಂದಲ್ಲ ಒಂದು ರೀತಿ ಇಡೀ ತಂಡದವರು ತೊಡಿಸಿಕೊಳ್ಳುತ್ತಾರೆ.

* ಶೋ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ, ಅದಕ್ಕಾಗಿ ನಿಮ್ಮ ತಯಾರಿ?
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಜನರು ತಮ್ಮದೇ ಸ್ವಂತ ಶೋ ಎಂಬಂತೆ ಅರ್ಥೈಸಿಕೊಂಡು ನೋಡುತ್ತಿದ್ದಾರೆ. ಹಾಗಾಗಿ ತಂಡದ ಮೇಲೆ ಜವಬ್ದಾರಿ ಜೊತೆಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಅವರ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡುವುದು ದೊಡ್ಡ ಸಾಹಸ, ಪ್ರತಿ ಸಂಚಿಕೆಗಾಗಿ ಸಾಧಕರ ಜಾಲ ಬೆನ್ನತ್ತ ಹೊರಡುವ ತಂಡ ಬಹಳ ಆಳವಾಗಿ ಇಳಿದು ಮಾಹಿತಿ ಸಂಗ್ರಹಿಸುತ್ತಾರೆ. ಮೊದಲಿಗೆ ಸಾಧಕರ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿ, ಅವರ ಬಾಲ್ಯದ ಫೋಟೋ, ವಿದ್ಯಾಬ್ಯಾಸ ಸೇರಿದಂತೆ ಒಂದರ ನಂತರ ಒಂದು ಎಂಬಂತೆ ಮಾಹಿತಿ ಕಲೆ ಹಾಕಿ ಒಂದು ಡ್ರಾಪ್ಟ್ ಮಾಡಿಕೊಳ್ಳುತ್ತೇವೆ. ನಾವು ಸಂಗ್ರಹಿಸುವ ಮಾಹಿತಿ ಬಗ್ಗೆ ಸಾಧಕರಿಗಾಗಲಿ, ಅವರಿಗೆ ಸಂಬಂಧಿಸಿದವರಿಗಾಗಲಿ ಗೊತ್ತೆ ಇರುವುದಿಲ್ಲ ಹಾಗೂ ನಾವು ಅವರ ಆತ್ಮೀಯರ ಬಳಿಯೂ ಕೇಳಿ ತಿಳಿದುಕೊಳ್ಳುವುದಿಲ್ಲ, ಸಂಚಿಕೆ ಚಿತ್ರೀಕರಣದ ವೇಳೆಯೆ ಆ ರಹಸ್ಯ ಬಹಿರಂಗವಾಗಲಿದೆ.

*ನಿಮ್ಮ ಹಿನ್ನಲೆ ಹೇಳಿ?
ಎಡಿಟರ್ ಆಗಬೇಕೆಂದು ಈ ಕ್ಷೇತ್ರಕ್ಕೆ ಬಂದ ನಾನು ಇಂದು ಕನ್ನಡ ಅತಿ ರಿಯಾಲಿಟಿ ಶೋ ನಿರ್ದೇಶಕ ಎಂದು ಗುರುತಿಸಿಕೊಳ್ಳಲು ಬಹಳ ಹೆಮ್ಮೆ ಇದೆ. ಅದಕ್ಕೆ ಜೀವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ಬೆಂಬಲ ಕಾರಣ. ನಮ್ಮ ತಂದೆ ಟ್ರಾವರಲ್ ಆದ ಕಾರಣ ನಾವು ರಾಜ್ಯದ ನಾನಾಕಡೆ ಸುತ್ತಾಡಿ ಮೈಸೂರಿಗೆ ಬಂದು ನೆಲೆಸಿದ್ದೇವು. ಮೈಸೂರಿನಲ್ಲಿಯೇ ಡಿಪ್ಲೋಮ ಇನ್ ಮೆಕಾನಿಕಲ್ ಇಂಜಿನಿಯರ್ ಮುಗಿಸಿದ ನನಗೆ ರಂಗ ಭೂಮಿ ವ್ಯಾಮೋಹವಿತ್ತು. ಅದಕ್ಕಾಗಿ ನಿರಂತರ ಫೌಂಡೇಷನ್‌ನಲ್ಲಿ ರಂಗ ತರಬೇತಿ ಕೂಡ ಪಡೆದಿದ್ದೇನೆ. ಇದೇ ಶೋನ ಆವೃತ್ತಿ 1-2ರಲ್ಲಿ ರಿಸರ್ಚ್ ಲೀಡ್ ಮಾಡಿದ ಅನುಭವದ ಮೇರೆಗೆ ಇಂದು ಇಂತಹ ಬಹುದೊಡ್ಡ ಶೋಗೆ ಪೂರ್ಣಪ್ರಮಾಣದ ನಿರ್ದೇಶಕನಾಗಿರುವುದು ಖುಷಿ ತಂದಿದೆ. ಈ ವಿಚಾರ ನನ್ನ ಪಕ್ಕದ ಮನೆಯವರಿಗೂ ಗೊತ್ತಿಲ್ಲ. ಅಷ್ಟೆ ಯಾಕೆ ನಮ್ಮ ಪೋಷಕರಿಗೂ ಇತ್ತೀಚೆಗೆ ಈ ವಿಷಯ ತಿಳಿಯಿತು.

*ನಟ,ನಿರ್ದೇಶಕ, ನಿರೂಪಕ ರಮೇಶ್ ಅವರೊಂದಿಗೆ ಅನುಭವ ಹೇಗಿತ್ತು?
ರಮೇಶ್ ಸರ್ ಒಬ್ಬ ದಿಗ್ಗಜ ಕಲಾವಿದ, ಶೋನಲ್ಲಿ ಎಲ್ಲರಿಗೂ ಅವರು ಒಂಥರಾ ಎನರ್ಜಿ ಬೂಸ್ಟರ್, ಯಾವುದಕ್ಕೂ ಒತ್ತಡ ಹಾಕುವುದಿಲ್ಲ, ಒಬ್ಬ ವ್ಯಕ್ತಿ ಮೇಲೆ ನಂಬಿಕೆ ಬಂತು ಎಂದರೆ ಅವರನ್ನು ತುಂಬಾ ನಂಬುತ್ತಾರೆ. ನಾವು ಏನೇ ಹೇಳಿದರೂ ಅದಕ್ಕೆ ಶೇ ೧೦೦ರಷ್ಟು ಪರಿಶ್ರಮ ಹಾಕುವುದಲ್ಲದೇ, ಸನ್ನಿವೇಶಗಳಿಗೆ ತಕ್ಕಂತೆ ಬೇಕಾದ ಕೆಲ ಅಂಶಗಳನ್ನು ಅವರೇ ಸೃಷ್ಟಿಸಿಕೊಂಡು ನಿರೂಪಣೆ ಮಾಡುತ್ತಾರೆ. ಇಂದು ೧೦ಕ್ಕೆ ಚಿತ್ರೀಕರಣ ಇದೆ ಎಂದರೆ ಸಾಕು ಅಂದು ಬೆಳಿಗ್ಗೆ ೮ಕ್ಕೆ ಹಾಜರಾಗಿ ರಿಹಸರ್ಲ್ ಮಾಡುತ್ತಾರೆ. ಶೋಗಾಗಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ, ಪ್ರತಿಯೊಬ್ಬರಿಗೆ ನೀಡುವ ಗೌರವ, ಮಾತಾನಡುವ ಶೈಲಿ, ನಿರೂಪಣೆ ಮಾಡುವ ರೀತಿಗೆ ಕನ್ನಡ ಪ್ರೇಕ್ಷಕರಿಗೆ ಫಿದಾ ಆಗಿದ್ದಾರೆ .

*ದೊಡ್ಡ ಮಟ್ಟದ ರಿಯಾಲಿಟಿ ಶೋನ ನಿರ್ದೇಶನಕ್ಕೆ ಅವಕಾಶ ಬಂದಾಗ?
ಕಳೆದ 3 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿ, ಭಾರಿ ನಿರೀಕ್ಷೆ ಹುಟ್ಟಿಸಿದ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಿರ್ದೇಶನ ಮಾಡಿ ಎಂದಾಗ ಮೊದಲಿಗೆ ಭಯ ಆಗಿದ್ದು ನಿಜ. ಈ ಮೊದಲೇ ಸಂಶೋಧನಾ ತಂಡದಲ್ಲಿ ಲೀಡ್ ರೋಲ್ ಮಾಡಿದ್ದರಿಂದ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಗೊತ್ತಿತ್ತು. ಹಾಗಾಗಿ ಶೋಗೆ ನ್ಯಾಯ ಒದಗಿಸಲು ಬೇಕಾದ ತಯಾರಿ ಮಾಡಿಕೊಂಡೆ, ಮನೆ-ಮಠ ಬಿಟ್ಟು ತಂಡದೊಂದಿಗೆ ಬಹಳ ಶ್ರಮ ಹಾಕಿ ಸಂಶೋಧನೆಗೆ ಮುಂದಾದೆವು. ಅದಕ್ಕಾಗಿ ಮನಃಶಾಸ್ತ್ರಗಳ ಅಧ್ಯಯನ ಕೂಡ ಮಾಡಿಕೊಂಡು ಸಿದ್ಧತೆ ಆಯಿತು. ಹಾಗಾಗಿಯೇ ೪ನೇ ಆವೃತ್ತಿಯ ಮೊದಲ ಶೋ ಅಂದರೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಸಂಚಿಕೆ ಗ್ರಾಂಡ್ ಓಪನಿಂಗ್ ಆಗಿ ಯಶಸ್ವಿಯಾಗಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

* ಸಾಧಕರನ್ನು ಕರೆತನ್ನಿ ಎಂಬ ಒತ್ತಡಗಳು ಇದೆಯೇ? ಹಾಗೂ ತುಂಬಾ ಕಷ್ಟವಾದ ಸಂಚಿಕೆ?
ತುಂಬಾ ಒತ್ತಡಗಳು ಬರುತ್ತದೆ, ಅದಕ್ಕೆ ನಾನು ಎಲ್ಲಿಯೂ ಈ ಶೋನ ನಿರ್ದೇಶಕ ಎಂದು ಹೇಳಿಕೊಳ್ಳಿವುದಿಲ್ಲ, ಅಂತಹ ಸನ್ನಿವೇಶ ಎದುರಾದಾಗ ರಾಘವೇಂದ್ರ ಹುಣಸೂರ್ ಹಾಗೂ ಅಂಟೋನಿ ದಾಸ್ ಅವರೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಹಾಗೂ ಇನ್ಫೋಸಿಸ್ ಸಾಧಕರನ್ನು ಕರೆತಂದ ಸಂಚಿಕೆಗೆ ನಿಜಕ್ಕೂ ನಮ್ಮ ತಂಡ ತುಂಬಾ ಕಷ್ಟಪಟ್ಟಿದೆ. ಅವರ ಡೇಟ್ಸ್‌ಗಳ ಹೊಂದಾಣಿಕೆ ಹಾಗೂ ನಿಖರವಾದ ಮಾಹಿತಿ ಕಲೆ ಹಾಕುವುದು ದೊಡ್ಡ ಸವಾಲಾಗಿತ್ತು. ಶೋ ಮುಗಿದ ನಂತರ ಸಾಧಕರು ಕಳುಹಿಸುವ ಸಂದೇಶ ನೀಡುವ ಖುಷಿ ಯಾವುದಕ್ಕೂ ಸಾಟಿ ಇಲ್ಲ ಎನಿಸುತ್ತದೆ.

* ಸಿನಿಮಾ ಸೆಲಿಬ್ರಿಟಿಗಳಿಗೆ ಮಾತ್ರ ಸಿಮೀತ ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ?
ಆರೋಪ ಇದೆ, ಆದರೆ ನಾವು ಪ್ರತಿ ಆವೃತ್ತಿಯಲ್ಲಿ ಎಲ್ಲಾ ಕ್ಷೇತ್ರದ ಸಾಧಕರನ್ನು ಸಂಪರ್ಕಿಸಿ ಸಮಯ ಕೇಳುತ್ತೇವೆ, ಆದರೆ ಈ ಆವೃತ್ತಿಯಲ್ಲಿ ಅವರ ಡೇಟ್ ಹೊಂದಾಣಿಕೆ ಅಗಿರುವುದಿಲ್ಲ. ಅಷ್ಟೆ. ಕಳೆದ 4 ಸೀಸನ್‌ನಿಂದಲೂ ನಾವು ವಿರೇಂದ್ರ ಹೆಗಡೆ ಅವರನ್ನು ಸಂಪರ್ಕಿಸಿದ್ದೇವೆ, ಆದರೆ ಅವರು ಒಪ್ಪಿಗೆ ನೀಡಿದ್ದು ಪ್ರಸಕ್ತ ಆವೃತ್ತಿಗೆ ಎಂಬುದು ನಮಗೆ ಮಾತ್ರ ಗೊತ್ತು. ಈ ಆವೃತ್ತಿಯಲ್ಲಿ ಸಾಧ್ಯವಾದಷ್ಟು ವಿಭಿನ್ನ ಕ್ಷೇತ್ರದ ಸಾಧಕರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ.

*ಕನ್ನಡ ಪ್ರೇಕ್ಷಕರಿಗೆ ನಿಮ್ಮ ಸಂದೇಶ?
ಜೀ ವಾಹಿನಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇಂತಹ ಕಾರ್ಯಕ್ರಮದ ಭಾಗವಾಗಿದ್ದೇ ನನ್ನ ಭಾಗ್ಯ. ನಾವು ತುಂಬಾ ಕಷ್ಟುಪಟ್ಟು ಕೆಲಸ ಮಾಡಿದ್ದನ್ನು, ಜನರು ಅಷ್ಟೆ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅವರಿಗೆ ಬೇಕಾದ ಮನೋರಂಜನೆ ಉಣಬಡಿಸುವ ಪ್ರಯತ್ನ ಸದಾ ಮುಂದುವರೆಯಲಿದೆ. ನಮ್ಮ ತಂಡದೊಂದಿಗೆ ಏಕಲವ್ಯನಂತೆ ಕೈಜೋಡಿಸುವ ರಾಘವೇಂದ್ರ ಹುಣಸೂರು ಅವರ ಮಾರ್ಗದರ್ಶನ, ಬೆಂಬಲಕ್ಕೆ ಇಡೀ ತಂಡ ಚಿರಋಣಿ. ಕನ್ನಡ ಪ್ರೇಕ್ಷಕರ ನಾಡಿ ಮಿಡಿತ ಅವರ ಆಲೋಚನೆಗೆ ಜನರು ಫಿದಾ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ಪ್ರತಿ ಸೋಮವಾರ ಫೇಸುಬುಕ್‌ನಲ್ಲಿ ಪ್ರಕಟವಾಗುವ ಮೋಟಿವೇಶನ್ ವಿತ್ ರಮೇಶ್‌ಗೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಗಮನಾರ್ಹ

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೇವಲ ಒಂದು ರಿಯಾಲಿಟಿ ಶೋ ಮಾತ್ರ ಅಲ್ಲ… ಇದು ಒಂದು ಜೀವನ. ಇಲ್ಲಿ ತಾಳ್ಮೆ, ಸಹನೆ ಬಗ್ಗೆ ಪಾಠ ಕಲಿಯಬಹುದು. ಜೊತೆಗೆ ಸಂಬಂಧಗಳ ಬೆಲೆ ಗೊತ್ತಾಲಿದೆ. ಇಲ್ಲಿ ಯಾವುದು ನಕಲಿ ಅಲ್ಲ… ಎಲ್ಲವು ಸತ್ಯ…. ಜೀವನದಲ್ಲಿ ಹೇಗೆ ಇರಬೇಕು, ಹೇಗೆ ಬದಕಬೇಕು ಎಂಬುದು ಅನಾವರಣಗೊಳ್ಳಲಿದೆ. ಶೋಗಾಗಿ ನಾವು ಅನುಭವಿಸುವ ಕಷ್ಟ, ನೋವಿನಲ್ಲೂ ಖುಷಿ, ಸಂತೋಷ ಅಡಕವಾಗಿದೆ.
ಅನಿಲ್ ಕುಮಾರ್.ಜೆ
ನಿರ್ದೇಶಕ

ಜೀವಾಹಿನಿಯ ಫೇಸು ಬುಕ್ ಪೇಜ್‌ನಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ ಮೂಡಿ ಬರುತ್ತಿರುವ Monday Motivation With Ramesh……. ನಲ್ಲಿ ಯುವಜನತೆಗೆ ಅದ್ಬುತ ವಿಚಾರ ವಿನಿಮಯ ಮಾಡಿಕೊಂಡು ಸ್ಪೂರ್ತಿದಾಯಕದಲ್ಲಿ ವಾರವನ್ನು ಶುರು ಮಾಡಲಾಗುತ್ತಿದೆ. ಇದು ಈ ಶೋನ ಭಾಗವಾಗಿ ಮೊತ್ತೊಂದು ಆಕರ್ಷಣೆ ಕೂಡ ಆಗಿದೆ ಎಂದು ಜೀವಾಹಿನಿಯ ಮಾರ್ಕೆಟಿಂಗ್ ಮತ್ತು ಪಿಆರ್  ಮ್ಯಾನೇಜರ್ ಆದ ಶ್ರೀ ರಾಮ್ ತಿಳಿಸಿದ್ದಾರೆ.

Leave a Comment