ವಿ.ಎಸ್.ಕೆ ವಿವಿ ಘಟಿಕೋತ್ಸವ ಬಾರದ ರಾಜ್ಯಪಾಲರು, ಸಚಿವರು

ಬಳ್ಳಾರಿ, ಮೇ.14: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಇಂದು ನಡೆದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವವು ಕುಲಾಧಿಪತಿ ರಾಜ್ಯ ಪಾಲರು, ಸಮಕುಲಾಧಿಪತಿ ಉನ್ನತ ಶಿಕ್ಷಣ ಸಚಿವರ ಗೈರಿನಲ್ಲಿ ನಡೆಯಿತು. ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ದಾದಿ ಹೃದಯ ಮೋಹಿಸಿ ಗೈರಿನಲ್ಲಿ ಅವರ ಪ್ರತಿನಿಧಿ ಬಿ.ಕೆ.ಮೃತ್ಯುಂಜಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಘಟಿಕೋತ್ಸವ ಆರಂಭಕ್ಕೂ ಮುನ್ನ ಕುಲಪತಿಗಳಾಧಿಯಾಗಿ ಎಲ್ಲರು ವಿಜಯನಗರ ಅರಸರ ಪೇಟಗಳನ್ನು ಧರಿಸಿ, ಕುಲಸಚಿವರು ದಂಡ ಹಿಡಿದುಕೊಂಡ‌ ಘಟಿಕೋತ್ಸವದ ಮೆರವಣಿಗೆ ಸಾಗಿ ಬಂತು.

ಮೌಲ್ಯ ಮಾಪನ ಕುಲಸಚಿವ ಪ್ರೊ|| ರಮೇಶ ಅವರ ಸ್ವಾಗತ ಮತ್ತು ಅತಿಥಿಗಳ ಪರಿಚಯದಿಂದ ಆರಂಭಗೊಂಡ ಸಮಾರಂಭದಲ್ಲಿ ಆರಂಭಿಕವಾಗಿ ಕುಲಪತಿ, ಡಾ|| ಸುಭಾಷ್ ಅವರು ವಿವಿಯ ಬೆಳವಣಿಗೆ ಬಗ್ಗೆ ವರದಿ ವಾಚನ ಮಾಡಿ ಇನ್ನು ಕೆಲದಿನಗಳಲ್ಲಿ ಯುಜಿಸಿಯಿಂದ ತಜ್ಞರ ಸಮಿತಿ ವಿವಿಗೆ ಭೇಟಿ ನೀಡಲಿದ್ದು ವಿವಿಗೆ 12 ಬಿ ಮಾನ್ಯತೆ ದೊರೆಯಲಿದೆ ಆ ಮೂಲಕ ವಿವಿ ಅಭಿವೃದ್ಧಿಗೆ ಹೆಚ್ಚಿನ ಧನಸಹಾಯ ದೊರೆಯಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ವಿವಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಸಿಬ್ಬಂದಿ ನೇಮಕ ಪಾರದರ್ಶಕವಾಗಿ ನ‌ಡೆದಿದೆ ಎಂದು ಹೇಳಿ ಕಳೆದ ಆರು ವರ್ಷಗಳಲ್ಲಿ ವಿವಿ ಸ್ಥಾಪನೆಯಿಂದ ಸ್ನಾತಕೋತ್ತರ ಶಿಕ್ಷಣ ಪಡೆಯುವವರ ಸಂಖ್ಯೆಯಲ್ಲಿ ಶೇ.105ರಷ್ಟು ಮತ್ತು ಪದವಿ ಶಿಕ್ಷಣ ಪಡೆಯುವವರಲ್ಲಿ ಶೇ.89ರಷ್ಟು ಹೆಚ್ಚಿದೆ ಎಂದು ವಿವರಿಸಿದರು.

ರಾಜ್ಯಪಾಲರಿಲ್ಲದ ಕಾರಣ ಅವರ ಸ್ಥಾನ ಅಲಂಕರಿಸಿದ ಕುಲಪತಿಗಳು ಪಿ.ಹೆಚ್.ಡಿ, ಮತ್ತು ವಿವಿಧ ಪದವಿಗಳಲ್ಲಿ ಱ್ಯಾಂಕ್ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ರಾಜಯೋಗಿನಿ ಪರವಾಗಿ ಗೌರವ ಡಾಕ್ಟರೇಟ್ ಪಡೆದ ಬಿ.ಕೆ.ಮೃತ್ಯುಂಜಯ ಅವರು ಮಾತನಾಡುತ್ತಾ ಆಧ್ಯಾತ್ಮಿಕತೆಯಿಂದ ಜನರು ದೂರವಾಗುತ್ತಿರುವುದು ಮಾತಲ್ಲಿ ಮೌಲ್ಯಗಳಿಲ್ಲದಂತಾಗಿದೆ. ಅದಕ್ಕೆ ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ ಮುಖಂಡರುಗಳು ಆಡುತ್ತಿರುವ ಮಾತುಗಳೇ ಸಾಕ್ಷಿಯಾಗಿದೆ. ನೈತಿಕ ಮೌಲ್ಯಗಳು ಕುಸಿಯುತ್ತಿದ್ದು ವಿವಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಪ್ರಯೋಗಾಲಯಗಳಾಗಬೇಕೆಂದರು.

ಕುಲಸಚಿವೆ ಪ್ರೊ|| ತುಳಸಿ ಮಾಲಾ, ಸಿಂಡಿಕೇಟ್ ಸದಸ್ಯರು, ವಿವಿಧ ವಿಭಾಗಗಳ ಡೀನರು ವೇದಿಕೆಯಲ್ಲಿದ್ದರು.

Leave a Comment