ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸೇನಾ ಆಗ್ರಹ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೦- ನಗರದಲ್ಲಿನ ವಿಷ್ಣು ಪುಣ್ಯ ಭೂಮಿಗೆ 10 ಗುಂಟೆ ಜಮೀನನ್ನು ಉಚಿತವಾಗಿ ಅಭಿಮಾನ್ ಸ್ಟುಡಿಯೋ ಮಾಲೀಕರು ಒಪ್ಪಿಗೆ ನೀಡಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವಿಷ್ಣು ಪುಣ್ಯಭೂಮಿ ನಿರ್ಮಾಣದ ಸಮಸ್ಯೆ ಬಗೆಹರಿಸುವಂತೆ ವಿಷ್ಣು ಸೇನಾ ಸಂಘಟನೆ ಆಗ್ರಹಿಸಿದೆ.
ವಿಷ್ಣು ಪುಣ್ಯಭೂಮಿಯ ಜಾಗದ ಕುರಿತಂತೆ ಅಭಿಮಾನ್ ಸ್ಟುಡಿಯೋ ಮಾಲೀಕ ಕಾರ್ತಿಕ್ ಹಾಗೂ ಗಣೇಶ್ ನಡುವೆ ನಡೆಸಿದ ಮಾತುಕತೆ ವೇಳೆ ಪುಣ್ಯಭೂಮಿಗೆ 10 ಗುಂಟೆ ಜಮೀನನ್ನು ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವಿ.ಎಸ್.ಎಸ್. ರಾಜು ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ನವೆಂಬರ್ 28 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ವಿಷ್ಣು ಪುಣ್ಯಭೂಮಿ ಜಾಗದ ವಿವಾದದ ಇತ್ಯರ್ಥ ಸಂಬಂಧ ಸಲ್ಲಿಸಿದ್ದ ಮನವಿಗೆ ಸೂಕ್ತ ಸ್ಪಂದನೆ ದೊರೆತಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೂಮಿ ಉಚಿತವಾಗಿ ನೀಡಲು ಮುಂದಾಗಿರುವ ಅಭಿಮಾನ್ ಸ್ಟುಡಿಯೋ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಾಸ್ ಪಡೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ವಿಷ್ಣು ಪುಣ್ಯಭೂಮಿ ನಿರ್ಮಾಣ ಕೋಟ್ಯಾಂತರ ಅಭಿಮಾನಿಗಳ ಕನಸಾಗಿದೆ. ಇದನ್ನು ಸರ್ಕಾರ ನೆರವೇರಿಸಿ ಜಾಗವನ್ನು ಉಚಿತವಾಗಿ ನೀಡಲು ಮುಂದಾಗಿರುವ ಅಭಿಮಾನ್ ಸ್ಟುಡಿಯೋ ಮೇಲಿನ ಮೊಕದ್ದಮೆಗಳನ್ನು ವಾಪಾಸ್ ಪಡೆದು ಬಾಲಕೃಷ್ಣ ಅವರ ಕನಸಿನ ಅಭಿಮಾನ್ ಸ್ಟುಡಿಯೋ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಮೈಸೂರಿನ ವಿಷ್ಣು ಸ್ಮಾರಕವನ್ನು ತ್ವರಿತಗತಿಯಲ್ಲಿ ನಿರ್ಮಾಣ ಮಾಡಬೇಕು. ಸ್ಮಾರಕಕ್ಕೆ ಜಮೀನು ನೀಡಲು ಮುಂದಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಸ್ಮಾರಕ ನಿರ್ಮಾಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

Leave a Comment