ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟನೆ

ರಾಜ್ಯದ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅತ್ಯವಶ್ಯಕ
ರಾಯಚೂರು.ಅ.12- ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಜನರ ಸಹಭಾಗಿತ್ವ ಅತ್ಯವಶ್ಯಕವಾಗಿದೆಂದು ಸಂಸದ ಬಿ.ವಿ.ನಾಯಕ ಕರೆ ನೀಡಿದರು.
ಅವರಿಂದು ಜಿ.ಪಂ. ಸಭಾಂಗಣದಲ್ಲಿ ನವ ಕರ್ನಾಟಕ ವಿಷನ್ -2025 ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರು 2025ರೊಳಗೆ ರಾಜ್ಯವೂ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿ ದೇಶದಲ್ಲಿ ನಂಬರ್- 01 ಸ್ಥಾನ ಅಲಂಕರಿಸಬೇಕೆಂಬ ಕನಸು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರ ಕಂಡ ಕನಸು ಸಹಕಾರಗೊಳಿಸುವ ನಿಟ್ಟಿನಲ್ಲಿ ನವ ಕರ್ನಾಟಕ ಕಾರ್ಯಾಗಾರ ಅಯೋಜಿಸಿ ಸಾಮಾನ್ಯ ಜನರಿಂದ ಹಿಡಿದು ಚುನಾಯಿತ ಜನಪ್ರತಿನಿಧಿಗಳವರೆಗೂ ಅಭಿಪ್ರಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆಂದರು.
ಪ್ರಜಾಪ್ರಭುತ್ವವುಳ್ಳ ದೇಶದಲ್ಲಿ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ತೆರಳಿ ಮತ ಕೇಳುವ ಮನೋಭಾವನೆ ತೊಲಗಿಸಿ, ಅವರ ಜೊತೆ ನಿರಂತರ ಸಂಪರ್ಕ ಹೊಂದುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆಂದರು. ದೇಶದಲ್ಲಿ ವಿವಿಧ ಪಕ್ಷಗಳು ತಮ್ಮದೇಯಾದ ತತ್ವ ಸಿದ್ಧಾಂತಗಳನ್ನು ಹೊಂದಿವೆಂದರು.
ಜನರ ಆಶಯ ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು, ಭಾರತ ವಿಷನ್ -2022 ಗುರಿ ಹೊಂದಿರುವ ಮಾದರಿಯಲ್ಲಿ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನವ ಕರ್ನಾಟಕ ವಿಷನ್ – 2025 ಎಂಬ ಸಂಕಲ್ಪ ಹೊಂದಿದ್ದಾರೆ. ಸರ್ಕಾರದ ಯೋಜನೆಗಳು ಸಾಮಾನ್ಯ ಜನರ ಮನೆ ಬಾಗಿಲಿಗೆ ಸಮರ್ಪಕವಾಗಿ ತಲುಪಬೇಕಾದರೇ, ಅಧಿಕಾರಿ, ಜನಪ್ರತಿನಿಧಿ ಹಾಗೂ ಸಾರ್ವಜನಿಕರ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯವೆಂದರು.
ಜಿಲ್ಲೆಯೂ ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ ಎನ್ನುವ ಜನರ ಕೂಗನ್ನು ಅರಿತುಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಕ್ತಿ ಮೀರಿ ಕಾರ್ಯ ನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಿಂದ 22 ಕೋಟಿ ರೂ.ಅನುದಾನದಡಿ ರಸ್ತೆ, ಫುಟ್ಪಾತ್ ಸೇರಿ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುತ್ತದೆ.
ರಾಯಚೂರನ್ನು ಮಾದರಿ ನಗರವನ್ನಾಗಿಸಲು ಸಂಪನ್ಮೂಲದ ಕೊರತೆ ಎದ್ದು ಕಾಣುತ್ತಿದೆ. ಸಿಸಿ ರಸ್ತೆ, ಒಳ ಚರಂಡಿ ಕಲ್ಪಿಸಬೇಕು. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲಾರಿ ಅಪಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಗುಡ್ ಶೆಡ್
ಸ್ಥಳಾಂತರಿಸಲಾಗುತ್ತದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ವಿಷನ್ -2022ರ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಹ ನವ ಕರ್ನಾಟಕ ನಿರ್ಮಿಸುವ ಉದ್ದೇಶದ ಮೇರೆಗೆ ವಿಷನ್ – 2025ರ ಗುರಿ ಹೊಂದಿದ್ದಾರೆ.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಜನರ ಸಹಭಾಗಿತ್ವ ಅತ್ಯವಶ್ಯಕವಾಗಿದೆ. ಸರ್ಕಾರದ ನೀತಿ ನಿರ್ಧಾರಗಳು ಪ್ರಕಟಿಸಲು ವಿಧಾನಸೌಧ ಶಕ್ತಿ ಕೇಂದ್ರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ಜನರಿಗೆ ತಲುಪಬೇಕಾದ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ಹಿನ್ನಡೆಯಾಗುತ್ತಿರುವುದನ್ನು ಮನಗಂಡ ಸರ್ಕಾರ ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
ರಾಜ್ಯ ಅಭಿವೃದ್ಧಿ ಹೊಂದಲು ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ರಾಷ್ಟ್ರೀಯ ಹೆದ್ದಾರಿ, ರೈಲು ಸಂಪರ್ಕ ಕಲ್ಪಿಸಿ ಜನರ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಿರುವ ಸೋನಾಮಸೂರಿ ಅಕ್ಕಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಬ್ರ್ಯಾಂಡ್ ಹೊಂದಿದೆ. ರೈತರಿಗೆ 24 ಗಂಟೆ ವಿದ್ಯುತ್ ಪೂರೈಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ರೈತರ ಪಂಪ್ ಸೆಟ್‌ಗಳಿಗೆ ಆರು ತಾಸು ವಿದ್ಯುತ್ ಪೂರೈಸಲಾಗುತ್ತದೆಂದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಶ್ರೀ ಸಾಮಾನ್ಯ ಜನರಿಗೆ ತಲುಪಬೇಕಾದರೇ, ಜನರ ಸಹಭಾಗಿತ್ವ ಅತ್ಯವಶ್ಯಕವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಅಧಿಕಾರಕ್ಕೆ ಬಂದ ನಂತರ ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದಂತೆ 165ರಲ್ಲಿ 158 ಬೇಡಿಕೆ ಈಡೇರಿಸಿ, ಪುನಃ ಜನರ ಬಳಿಗೆ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಡಿ ಎಂದು ಕೇಳುವುದು ಚುನಾವಣಾ ಸಂದರ್ಭದಲ್ಲಿ ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು 12 ಬಾರಿ ಬಜೆಟ್ ಮಂಡಿಸಿದ್ದಾರೆ.
ವೇದಿಕೆಯಲ್ಲಿ ಶಾಸಕ ಹಂಪಯ್ಯ ಸಾಹುಕಾರ, ವಿಷನ್-2025 ದಾಖಲಾತಿ ಪ್ರಾಜೆಕ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾ ಚಿದಂಬರಂ, ಜಿ.ಪಂ. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ.ಸಿಇಓ ಅಭಿರಾಮ ಜಿ.ಶಂಕರ್ ಉಪಸ್ಥಿತರಿದ್ದರು.

Leave a Comment