ವಿಶ್ವ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಜಾಥಾ

ಮೈಸೂರು. ಅ.18- ಮಹಾರಾಣಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಂದು ವಿಶ್ವ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಮಹಾರಾಣಿ ಪದವಿಪೂರ್ವ ಕಾಲೇಜು ಬಳಿ ಜಾಥಾಕ್ಕೆ ಬಲೂನ್ ಹಾರಿ ಬಿಡುವ ಮೂಲಕ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಹಿಳೆಯರು ಯಾವುದೇ ಮುಜುಗರಕ್ಕೆ ಒಳಗಾಗದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸ್ತನ ಕ್ಯಾನ್ಸರ್‌ ಮತ್ತಿತರ ಮಾರಕ ಕಾಯಿಲೆಗಳಿಂದ ದೂರ ಇರಬಹುದು. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗ, ಧ್ಯಾನ ಮಾಡುವ ಜತೆಗೆ ಪೌಷ್ಠಿಕಾಂಶಯುಕ್ತ ಆಹಾರ ತೆಗೆದುಕೊಳ್ಳಬೇಕು. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಮುಜುಗರಪಟ್ಟುಕೊಳ್ಳದೆ ವೈದ್ಯರ ಬಳಿ ತಪಾಸಣೆ ಮಾಡಿಕೊಂಡು ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ಸುಯೋಗ್ ಆಸ್ಪತ್ರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕ್ಲಿಯರ್ ರೇಡಿಯೆಂಟ್ ಆಸ್ಪತ್ರೆ, ಮಹಾರಾಣಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಜಾಥಾ ನಡೆಸಲಾಯಿತು.
ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು ಕ್ಯಾನ್ಸರ್ ಒಂದು ಪಿಡುಗಲ್ಲ. ಅದೊಂದು ಪರೀಕ್ಷೆ, ಕ್ಯಾನ್ಸರ್ ರೋಗಿಗೆ ಅನುಕಂಪಕ್ಕಿಂತ ಪ್ರೀತಿ ತೋರಿಸಿ ಎಂದು ಜಾಥಾದಲ್ಲಿ ನಾಮಫಲಕ ಹಿಡಿದು ಘೋಷಣೆ ಕೂಗುತ್ತ ಪ್ರಮುಖ ಬೀದಿಗಳಲ್ಲಿ ಸಾಗಿ ಜಾಗೃತಿ ಮೂಡಿಸಿದರು.

Leave a Comment