ವಿಶ್ವ ದರ್ಜೆಯ ತಂಡ ಭಾರತದ ವಿರುದ್ಧ ಸ್ಪರ್ಧಿಸಲು ಉತ್ಸಕನಾಗಿದ್ದೇನೆ: ವಿಲಿಯಮ್ಸನ್‌

ವೆಲ್ಲಿಂಗ್ಟನ್‌, ಫೆ 20 -‘ವಿಶ್ವ ದರ್ಜೆಯ ವೇಗದ ದಾಳಿಯೊಂದಿಗೆ ವಿಶ್ವದರ್ಜೆಯ ತಂಡ’ ಎಂದು ಭಾರತ ತಂಡವನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದಾರೆ.

ಇಲ್ಲಿನ ಬೇಸಿನ ರಿವರ್‌ ಅಂಗಳದಲ್ಲಿ ನಾಳೆಯಿಂದ ಆರಂಭವಾಗುವ ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,” ವಿಶ್ವದ ಎಲ್ಲ ಪರಿಸ್ಥಿತಿಗಳಲ್ಲಿಯೂ ವಿಶ್ವ ದರ್ಜೆಯ ವೇಗದ ದಾಳಿ ನಡೆಸುವ ಭಾರತ ವಿಶ್ವ ದರ್ಜೆಯ ತಂಡವಾಗಿದೆ,” ಎಂದು ಕೊಂಡಾಡಿದರು.

“ಭಾರತದ ವಿರುದ್ಧ  ನಮ್ಮ ತಂಡಕ್ಕೆ ನಿಜವಾಗಿಯೂ ಇದು ಉತ್ತೇಜಕ ಅವಕಾಶ. ಆದರೆ, ನಮ್ಮ ಯೋಜನೆಗಳಿಗೆ ತಕ್ಕಂತೆ ಪರಿಸ್ಥಿತಿಗಳಿಗೆ ಹೊಂದಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಆಗ ಮಾತ್ರ ನಮ್ಮ ಪರ ಫಲಿತಾಂಶಗಳು ಮೂಡಲು ಸಾಧ್ಯ,” ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಭಾರತ ಆಡಿರುವ ಎಲ್ಲ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಟೀಮ್‌ ಇಂಡಿಯಾ ಈ ಸಾಧನೆಯ ಶ್ರೇಯ ವೇಗಿಗಳಾದ ಜಸ್ಪ್ರಿತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ ಹಾಗೂ ಉಮೇಶ್‌ ಯಾದವ್‌ ಅವರಿಗೆ ಸಲ್ಲುತ್ತದೆ.

ಇಲ್ಲಿನ ಬೇಸಿನ್  ರಿವರ್‌ ಅಂಗಳದ ಪಿಚ್‌ ಬಗ್ಗೆ ಮಾತನಾಡಿ, “ಇಲ್ಲಿನ ಪಿಚ್‌ನಲ್ಲಿ ಚೆಂಡು ಹೆಚ್ಚಿನ ಚಲನೆಯನ್ನು ಹೊಂದಿದ್ದು, ಇದು ವೇಗಿಗಳಿಗೆ ನೆರವಾಗಲಿದೆ. ಬ್ಯಾಟ್ಸ್‌ಮನ್‌ಗಳು ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್‌ ಮಾಡಬೇಕಾಗುತ್ತದೆ. ಅಲ್ಲದೆ, ಶಾಟ್‌ ಆಯ್ಕೆಯಲ್ಲೂ ಎಚ್ಚರ ವಹಿಸಬೇಕು,” ಎಂದು ಸಲಹೆ ನೀಡಿದ್ದಾರೆ.

  “ತಮ್ಮ ಮೊದಲನೇ ಮಗುವಿನ ಜನನದ ನಿರೀಕ್ಷೆಯಲ್ಲಿರುವ ನೀಲ್‌ ವ್ಯಾಗ್ನರ್‌ ಮೊದಲನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಅವರ ಬದಲು ಕೈಲ್‌ ಜಾಮಿಸನ್‌ ಅವರು ಅಂತಾರಾಷ್ಟ್ರೀಯ ಟೆಸ್ಟ್‌ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡುವುದು ಖಚಿತ,” ಎಂದು ನಾಯಕ ಕೇನ್‌ ವಿಲಿಯಮ್ಸನ್‌ ಸ್ಪಷ್ಟಪಡಿಸಿದ್ದಾರೆ.

Leave a Comment