ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಗಳ ಗೋಳು

ಬೆಂಗಳೂರು, ಫೆ. ೧೧- ರಾಜ್ಯ ಸರ್ಕಾರ ವಿಶ್ವೇಶ್ವರಯ್ಯ ಬಡಾವಣೆ ಅಭಿವೃದ್ಧಿಗೆ 530 ಕೋಟಿ ರೂ. ನೀಡಿದ್ದರೂ ಸಹ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಅವ್ಯವಸ್ಥೆಯಿಂದ ಕೂಡಿದ್ದು, ಜನರು ಭಯದಿಂದ ವಾಸಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್. ಎಂ ವಿಶ್ವೇಶ್ವರಯ್ಯ ನಗರ ಸಿಟಿಜನ್ ಫೋರಂ ಆರೋಪಿಸಿದೆ.

ವಿಶ್ವೇಶ್ವರಯ್ಯ ನಗರ ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಗೆ ಹೊಂದಿಕೊಂಡಿದ್ದು, 1800 ಎಕರೆ ಪ್ರದೇಶದಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಯಲ್ಲಿ 2500 ಕುಟುಂಬಗಳು ನೆಲೆಸಿವೆ. ಈ ಪೈಕಿ 1ನೇ ಬ್ಲಾಕ್‌ನಲ್ಲಿ ಸುಮಾರು 250 ಕುಟುಂಬಗಳು ವಾಸಿಸುತ್ತಿದ್ದು ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರು ಉಸಿರುಕಟ್ಟುವ ಪರಿಸರದಲ್ಲಿ ಜೀವ ಭಯದಿಂದ ಬದುಕುತ್ತಿದ್ದಾರೆ. 530 ಕೋಟಿ ರೂ. ನೀಡಿದ್ದರೂ ಕೇವಲ ಶೇ. 20 ರಷ್ಟು ಕೆಲಸ ನಡೆದಿದ್ದು, ಭ್ರಷ್ಟಾಚಾರ ಅವ್ಯವಹಾರ ದಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದು ಸಿಟಿಜನ್ ಪೋರಂ ಅಧ್ಯಕ್ಷ ಎನ್. ನಂಜೇಗೌಡ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

1ನೇ ಬ್ಲಾಕ್ ನಲ್ಲಿರುವ ರಸ್ತೆಗಳು ಗುಂಡಿಗಳಿಂದ ತುಂಬಿದ್ದು ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟೆ, ಪೊದೆಗಳು ಬೆಳೆದಿವೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಾವು, ಚೇಳು, ಹಂದಿ, ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ತ್ಯಾಜ್ಯ ವಸ್ತುಗಳು ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದರಿಂದ ದುರ್ನಾತ ಬರುತ್ತಿದೆ.ಇದರಿಂದ ನಾಗರಿಕರು ವಾಸ ಮಾಡಲು ಭಯಭೀತರಾಗಿದ್ದಾರೆ. ಕೂಡಲೇ ಬಿಬಿಎಂಪಿಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಬಡಾವಣೆಗೆ ಸಮರ್ಪಕವಾಗಿ ಬಸ್ ಸೌಲಭ್ಯವಿಲ್ಲ. ಕಳ್ಳರ ಕಾಟ ಹೆಚ್ಚಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಉದ್ಯಾನವನಕ್ಕೆ ಸ್ಥಳವನ್ನು ನಿಗದಿಪಡಿಸಿದ್ದರೂ ಇಲ್ಲಿಯತನಕ ಉದ್ಯಾನವನ ನಿರ್ಮಿಸಿಲ್ಲ. ಬಡಾವಣೆಯ ಅಭಿವೃದ್ಧಿಗೆ ಸರ್ಕಾರ ನೂರಾರು ಕೋಟಿ ರೂ. ನೀಡಿದ್ದರೂ ಅದು ದುರುಪಯೋಗವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮೇಜರ್ ಸೀತಪ್ಪ, ಸಂಪಿಗೆ ಎನ್. ಶಿವಪ್ರಕಾಶ, ರಾಜಣ್ಣ ಹಾಜರಿದ್ದರು.

Leave a Comment