ವಿಶ್ವವೇ ಮೆಚ್ಚುವಂತಹ ಆಡಳಿತ ನೀಡುತ್ತಿರುವ ಮೋದಿ

ಕೆ.ಆರ್.ಪೇಟೆ, ಮೇ.31- ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತಾಲೂಕು ಬಿಜೆಪಿ ಘಟಕದ ವತಿಯಿಂದ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಆಡಳಿತದ ಮೊದಲ ವರ್ಷದ ವಿಜಯೋತ್ಸವವನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಅವರು ಮಾತನಾಡಿ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಎರಡನೇ ಅವಧಿಗೆ ಭರ್ಜರಿ ವಿಜಯ ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದು 1 ವರ್ಷ ಪೂರ್ಣಗೊಂಡಿರುವುದು ನಮ್ಮೆಲ್ಲರಿಗೂ ಹರ್ಷದಾಯಕ ವಿಚಾರವಾಗಿದೆ. ವಿಶ್ವವೇ ಮೆಚ್ಚುವಂತಹ ಅತ್ಯುತ್ತಮ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಅವರು ದೇಶದ ಜನತೆಗೆ ಪ್ರಮುಖವಾಗಿ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಶೌಚಾಲಯಗಳ ನಿರ್ಮಾಣ, ಸುಕನ್ಯಾ ಸಮೃದ್ಧಿ ಯೋಜನೆ, ಜಾನೌಷಧಿ ಕೇಂದ್ರ, ಆಯುಷ್ ಮಾನ್ ಭಾರತ್, ಬೇವು ಲೇಪಿತ ಗೊಬ್ಬರ, ಹೃದಯಕ್ಕೆ ಸ್ಟಂಟ್ ಅಳವಡಿಕೆ, 2 ಲಕ್ಷದ ವಿಮಾ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರು ಕಾಯಕ ಸಮುದಾಯಗಳಿಗೆ ಲಾಕ್‍ಡೌನ್ ಪರಿಹಾರ ನೀಡುತ್ತಿದ್ದಾರೆ. ಆಟೋ ಚಾಲಕರಿಗೆ, ಕ್ಷೌರಿಕರಿಗೆ, ನೇಕಾರರಿಗೆ 5ಸಾವಿರ ರೂ ನೀಡುತ್ತಿದ್ದಾರೆ, ಪ್ರತಿ ಕಾರ್ಮಿಕರಿಗೆ ಈಗಾಗಲೇ 2ಸಾವಿರ ನೀಡಿದ್ದು, ಮತ್ತೆ 3ಸಾವಿರ ನೀಡುತ್ತಿದ್ದಾರೆ ಇಂತಹ ಸರ್ವಶ್ರೇಷ್ಠ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರು ಉಳಿದ ನಾಲ್ಕು ವರ್ಷಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದೇಶದ ಜನರಿಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಭಾರತೀಯ ಜನತಾ ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವ ಕೆಲಸವನ್ನು ಮಾಡೋಣ ಎಂದು ಕೆ.ಶ್ರೀನಿವಾಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮಂಡ್ಯ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಎ.ಜಿ.ಪರಮೇಶ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಎನ್.ಕುಮಾರಸ್ವಾಮಿ, ಸಚಿವರ ಆಪ್ತ ಸಹಾಯಕ ದಯಾನಂದ್,ಎ.ಪಿ.ಕೇಶವಗೌಡ,ಡಿ.ಪಿ.ಪರಮೇಶ್, ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Share

Leave a Comment