ವಿಶ್ವಬ್ಯಾಂಕಿನಿಂದ ಭಾರತಕ್ಕೆ ೧ ಶತಕೋಟಿ ಡಾಲರ್ ನೆರವು

ವಾಷಿಂಗ್ಟನ್, ಏ ೩-ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಭಾರತಕ್ಕೆ ಒಂದು ಶತಕೋಟಿ ಅಮೆರಿಕನ್ ಡಾಲರ್ ತುರ್ತು ಹಣ ಬಿಡುಗಡೆಗೆ ವಿಶ್ವಬ್ಯಾಂಕ್ ಅನುಮೋದನೆ ನೀಡಿದೆ. ಕೊರೊನಾ ಸೋಂಕಿಗೆ ಈಗಾಗಲೇ ೬೦ ಮಂದಿ ಸಾವನ್ನಪ್ಪಿದ್ದು, ೨೦೬೯ ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ದ ಪ್ರಮಾಣದಲ್ಲಿ ವಿಶ್ವಬ್ಯಾಂಕ್ ಹಣ ಬಿಡುಗಡೆ ಮಾಡುವ ಮೂಲಕ ಭಾರತಕ್ಕೆ ಭರ್ಜರಿ ಕೊಡುಗೆ ನೀಡಿದೆ.
ಕೊರೊನೊ ಸೋಂಕು ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಜತೆಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಪತ್ತೆ, ಸೋಂಕು ಪತ್ತೆ ಪ್ರಯೋಗಾಲಯ ಸ್ಥಾಪನೆ, ವೈಯಕ್ತಿಕ ಸಂರಕ್ಷಣಾ ಸಲಕರಣೆಗಳುಮತ್ತು ಹೊಸದಾಗಿ ಐಸೊಲೇಷನ್ ವಾರ್ಡ್ ಸ್ಥಾಪನೆಗೆ ಒಂದು ಶತಕೋಟಿ ಅಮೆರಿಕನ್ ಡಾಲರ್ ಬಿಡುಗಡೆ ಮಾಡಲಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಕೋವಿಡ್ -೧೯ನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಶ್ವದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮೊದಲ ತುರ್ತು ಕಾರ್ಯಾಚರಣೆಗೆ ಈ ಹಣ ಬಿಡುಗಡೆ ಮಾಡಲು ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನಕ್ಕೆ ೨೦೦ ದಶಲಕ್ಷ ಡಾಲರ್, ಆಫ್ಘಾನಿಸ್ತಾನಕ್ಕೆ ೧೦೦ ದಶಲಕ್ಷ, ಮಾಲ್ಡೀವ್ಸ್‌ಗೆ ೭.೩ ದಶಲಕ್ಷ ಮತ್ತು ಶ್ರೀಲಂಕಾಗೆ ೧೨೮.೬ ದಶಲಕ್ಷ ಡಾಲರ್ ನೆರವನ್ನು ಪ್ರಕಟಿಸಿದೆ. ಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ೧೫ ದಿನಗಳ ಅವಧಿಗೆ ೧೬೦ ಶತಕೋಟಿ ಡಾಲರ್ ಅನುದಾನ ನೀಡಿದ್ದು, ಆರ್ಥಿಕ ಸಮತೋಲನ ಮತ್ತು ತಕ್ಷಣ ಆರೋಗ್ಯ ಸಂಘರ್ಷಕ್ಕೆ ಈ ಹಣ ಬಳಕೆ ಮಾಡಿಕೊಳ್ಳಬಹುದಾಗಿದೆ.
ಆರ್ಥಿಕ ಬೆಳವಣಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ ನೀಡುವುದರ ಜತೆಗೆ ಬಡವರ ಕಲ್ಯಾಣಕ್ಕಾಗಿ ಈ ಹಣವನ್ನು ಬಸಿಕೊಳ್ಳಲು ವಿಶ್ವಬ್ಯಾಂಕ್ ಅವಕಾಶ ಕಲ್ಪಿಸಿದೆ.

Leave a Comment