ವಿಶ್ವದ ಭವ್ಯ ಭವಿಷ್ಯ ನುಂಗಿದ ಕೊರೊನಾ

ಮುಕುಂದ
ಬೆಂಗಳೂರು, ಏ. ೭- “ಜಗತ್ ಪ್ರಳಯ”. ಈ ಪದಕ್ಕೆ ಇದೂವರೆಗೆ ಕಪಲೋ ಕಲ್ಪಿತ ಸನ್ನಿವೇಶಗಳನ್ನೇ ಬಣ್ಣಿಸಲಾಗುತ್ತಿತ್ತು. ಆಕಾಶವೇ ಕಳಚಿ ಬೀಳಬಹುದು, ಭೂಮಿಯೇ ಬಿರುಕು ಬಿಡಬಹುದು, ಸುನಾಮಿಯೇ ಅಪ್ಪಳಿಸಿ ಮನುಕುಲವೇ ಕೊಚ್ಚಿ ಹೋಗಬಹುದು ಎಂದೆಲ್ಲ ಊಹಿಸಲಾಗುತ್ತಿತ್ತು. ಜ್ಯೋತಿಷಿ-ವಿದ್ವಾಂಸರು ಈ ಊಹೆಗಳಿಗೆ ಬಗೆಬಗೆಯಾಗಿ ವಿಶ್ಲೇಷಿಸುತ್ತಿದ್ದರು.
ಈಗ ಸಮಯ ಬಂದಿದೆ. “ಜಗತ್ ಪ್ರಳಯ” ಎಂಬ ಪದದ ವಿಸ್ತೃತ ಅರ್ಥವನ್ನು ಬಿಡಿಬಿಡಿಯಾಗಿ, ಸಾಕ್ಷಿ-ಸನ್ನಿವೇಶಗಳ ಸಮೇತ ಹೇಳುವ ಕೆಟ್ಟ ದಿನಗಳು ಆರಂಭವಾಗಿವೆ.  ಹೌದು. ಪ್ರಳಯಾಂತಕ ಮಹಾಮಾರಿ ಕೊರೊನಾ ವೈರಾಣು ಈಗ ವಿಶ್ವದ ಎರಡು-ಮೂರರಷ್ಟು ಭಾಗವನ್ನು ಆವರಿಸಿದ್ದು, ಈ ದುಷ್ಯಕ್ತಿ ವೈರಾಣುವೊಂದು ಇಡೀ ವಿಶ್ವದ ವರ್ತಮಾನ ಹಾಗೂ ಭವಿಷ್ಯವನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದೆ.
ಚೀನಾದ ಮೂಲೆಯೊಂದರಲ್ಲಿ ಹುಟ್ಟಿಕೊಂಡ, ಬರಿಗಣ್ಣಿಗೆ ಕಾಣದ ಈ ವೈರಾಣು ನೋಡು ನೋಡುತ್ತಲೇ ಇಡೀ ವಿಶ್ವದಲ್ಲಿ ಹರಡಿ ಅಗಲ-ಆಳವಾದ ಮೃತ್ಯುಕೂಪವನ್ನೇ ಅಗೆದಿದೆ. ಈ ಪಿಶಾಚಿ ವೈರಾಣುವಿನಿಂದ ಬಲಿಯಾದವರ ಸಂಖ್ಯೆ ಈಗ ಕೇವಲ ಲಕ್ಷದ ಆಸು-ಪಾಸಿನಲ್ಲಿದ್ದರೂ ಇದರಿಂದ ಉಂಟಾದ ಆರೋಗ್ಯ-ಉದ್ಯೋಗ ಕ್ಷಾಮದ ಪರಿಣಾಮಕ್ಕೆ ತುತ್ತಾಗುವವರ ಸಂಖ್ಯೆ ಕೋಟಿ ಮೀರಲಿದೆ.
ಮನುಕುಲವನ್ನೇ ತಲ್ಲಣಗೊಳಿಸುತ್ತಿರುವ ಈ ಮಹಾರೋಗ ಜಗತ್ ಪ್ರಳಯಕ್ಕೆ ಈಗ ನಾಂದಿ ಹಾಡಿದೆ. ಒಂದೆಡೆ ಮನುಕುಲದ ಆರೋಗ್ಯ, ಇನ್ನೊಂದೆಡೆ ಆರೋಗ್ಯ ಕಾಪಾಡಲು ಅಗತ್ಯವಿರುವ ಆರ್ಥಿಕ ವೃದ್ಧಿ. ಇವೆರಡಲ್ಲಿ ಒಂದನ್ನು ಆಯ್ಕೆ ಮಾಡುವ ಸಂದಿಗ್ಧ ಸ್ಥಿತಿಗೆ ಈಗ ವಿಶ್ವ ತಲುಪಿದ್ದು, ಪ್ರಸ್ತುತ ಈ ವಿಚಾರ ಅತೀಶಯೋಕ್ತಿ ಎನಿಸಿದರೂ ಮುಂದಿನ ದಿನಗಳಲ್ಲಿ ಅತ್ಯಂತ ಪ್ರಸಕ್ತ ವಿಷಯ ವಸ್ತುವಾಗಲಿದೆ.

 

ಭಾರತದಲ್ಲಿ ಮಹಾಮಾರಿ ಕೊರೊನಾ ಒಂದಿಷ್ಟು ಹತೋಟಿಗೆ ಬರುತ್ತಿದ್ದರೂ ಇದೂವರೆಗಿನ ಲಾಕ್‌ಡೌನ್ ಹಾಗೂ ಅನಿರೀಕ್ಷಿತ ಭವಿಷ್ಯದ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿ ತೀವ್ರ ಏರುಪಾರಾಗಲಿದೆ. ವಾಣಿಜ್ಯ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ವೈದ್ಯಕೀಯ, ಸಾರಿಗೆ, ಸೇವಾಕ್ಷೇತ್ರ, ಮನೋರಂಜನೆ, ಪ್ರವಾಸೋದ್ಯಮ ಸೇರಿದಂತೆ ನಿತ್ಯ ಜೀವನಾಡಿ ಬಡಿತ ಕ್ಷೀಣಿಸುತ್ತಿದೆ.
ದೇಶ ಈಗ ಸ್ತಬ್ಧ ಸ್ಥಿತಿಯಲ್ಲಿದೆ. ಜನತೆಗೆ ಆಹಾರ ಪೂರೈಕೆ ಹಾಗೂ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಸೆಣಸಾಡುತ್ತಿದೆ. ಬಂಡವಾಳ ಶಾಹಿಗಳು ಕೈಚೆಲ್ಲಿದ್ದಾರೆ. ಕೈಗಾರಿಕೋದ್ಯಮಿಗಳಿಗೆ ದಿಕ್ಕು ತೋಚುತ್ತಿಲ್ಲ. ಲಾಕ್‌ಡೌನ್ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಈಗಾಗಲೇ ಅನೇಕ ಕೈಗಾರಿಕೆಗಳು ಮುಚ್ಚುವ ನಿರ್ಧಾರಕ್ಕೆ ಮುಂದಾಗಿದ್ದು, ಸಹಸ್ರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿಗೆ ಸತ್ತವರ ಸಂಖ್ಯೆ ಮೂರಂಕಿಯಲ್ಲಿದ್ದರೆ, ಇದರಿಂದ ಉಂಟಾಗುವ ಅನೀಶ್ಚಿತತೆ ಬದುಕಿನಿಂದಾಗಿ ಸಾಯುವವರ ಸಂಖ್ಯೆ ಸಹಸ್ರಾರು ಆಗಬಹುದೆಂದು ನಿರೀಕ್ಷಿಸಲಾಗುತ್ತಿದೆ.
ಕಳೆದ ವರ್ಷದ ಜಾಗತಿಕ ಮಟ್ಟದ ಆರ್ಥಿಕ ಹಿಂಜರಿತದ ಪರಿಣಾಮವನ್ನು ಹೊರತುಪಡಿಸಿದರೆ ದೇಶ ಶರವೇಗದಲ್ಲಿ ಅಭಿವೃದ್ಧಿಯತ್ತ ಸಾಗಲು ವಿವಿಧ ಯೋಜನೆಗಳನ್ನು ರೂಪಿಸಿತ್ತು. ಆದರೆ ಕೊರೊನಾ ವೈರಾಣು ಒಕ್ಕರಿಸಿ ಏಕಾಏಕಿ ಈ ವೇಗಕ್ಕೆ ಬ್ರೆಕ್ ಹಾಕಿದ್ದು, ಅಭಿವೃದ್ಧಿ ಸಂಪೂರ್ಣ ಸ್ತಬ್ಧವಾಗಿದೆ. ಈ ಸ್ಥಿತಿಯಿಂದ ಸುಧಾರಿಸಿಕೊಂಡು ಮತ್ತೆ ಅಭಿವೃದ್ಧಿಪಥದತ್ತ ಸಾಗಲು ದೇಶಕ್ಕೆ ವರ್ಷಾನುಗಟ್ಟಲೆ ಸಮಯ ಬೇಕಾಗುತ್ತದೆ.
ಸರ್ಕಾರ ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವಿವಿಧ ತೆರಿಗೆ, ಸುಂಕ, ದಂಡದ ಮೂಲಕ ನಿತ್ಯ ಸಂಗ್ರಹವಾಗುತ್ತಿದ್ದ ಸಹಸ್ರಾರು ಕೋಟಿ ರೂಪಾಯಿ ಆದಾಯಕ್ಕೆ ಏಕಾಏಕಿ ಕತ್ತರಿ ಬಿದ್ದಿದ್ದು, ಜಾಗತಿಕ ಮಟ್ಟದಲ್ಲಿ ಸಾಲ ಕೇಳುವ ಸ್ಥಿತಿಯಲ್ಲೂ ಇಲ್ಲ.
ದೇಶಕ್ಕೆ ಆದಾಯ ಮತ್ತು ಆರೋಗ್ಯ ಇವೆರಡೂ ಎರಡು ಮುಖಗಳ ಒಂದೇ ನಾಣ್ಯ ಇದ್ದಂತೆ. ಇವೆರಡಲ್ಲಿ ಒಂದನ್ನು ಆಯ್ಕೆ ಮಾಡುವ ಸಂದಿಗ್ಧ ಸ್ಥಿತಿಗೆ ಸರ್ಕಾರ ಸಿಲುಕಿದೆ. ಲಾಕ್‌ಡೌನ್‌ನ್ನು ಸಂಪೂರ್ಣ ತೆರವುಗೊಳಿಸದ ಹೊರತು ದೇಶಕ್ಕೆ ಆದಾಯವಿಲ್ಲ. ಇನ್ನು ಲಾಕ್‌ಡೌನ್ ಸಂಪೂರ್ಣ ಸಡಿಲುಗೊಳಿಸಿದರೆ ದೇಶದ ಜನತೆಯ ಆರೋಗ್ಯವನ್ನು ಪಣಕ್ಕಿಟ್ಟಂತಾಗುತ್ತದೆ. ಇದು ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸಿದೆ.
ದುಂದುವೆಚ್ಚಕ್ಕೆ ಬ್ರೇಕ್ ಹಾಕದಿದ್ದರೆ ಮಧ್ಯಮ ವರ್ಗಗಳ ಕುಟುಂಬಗಳ ದೋಣಿ ಮುಳುಗುತ್ತದೆ. ಇನ್ನು ಒಂದಿಷ್ಟು ದುಂದುವೆಚ್ಚ ಮಾಡದಿದ್ದರೆ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಿಸುವುದು ಕಷ್ಟಕರ. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಯಾಗುವುದು ಮನರಂಜನೆ ಹಾಗೂ ಐಷಾರಾಮಿ ವಸ್ತುಗಳಿಂದಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇವೆಲ್ಲವೂ ಒಂದಕ್ಕೊಂದು ತಳಕು ಹಾಕಿಕೊಂಡಿದ್ದು, ಇದರಿಂದಲೇ ಮುಂದಿನ ದಿನಗಳಲ್ಲಿ ಜನಜೀವನ ಇಕ್ಕಟ್ಟಿಗೆ ಸಿಲುಕಲಿದೆ.
ಸರ್ಕಾರ ರೂಪಿಸಿರುವ ಜನಕಲ್ಯಾಣ ಯೋಜನೆಗಳಲ್ಲಿ ಬಹುಪಾಲು ನಿಧಿ ಆಯ್ದ ಅಧಿಕಾರ ಹೊಂದಿರುವ ವರ್ಗಗಳಲ್ಲಿ ಸೋರಿಕೆಯಾಗುತ್ತಿದ್ದು, ಇದರ ಮೂಲ ಉದ್ದೇಶವೇ ಮರೀಚಿಕೆಯಾಗಿದೆ.

ಅರಾಜಕತೆಯ ಆತಂಕ
ಕೊರೊನಾ ದಾಳಿಯಿಂದಾಗಿ ಉದ್ಯೋಗಾವಕಾಶಗಳಿಂದ ಕೈತೊಳೆದುಕೊಳ್ಳುವ ಅವಿದ್ಯಾವಂತರಿಗೆ ಈಗ ಅಪರಾಧವೊಂದೇ ಜೀವನೋಪಾಯ ಎನ್ನುವ ಆತಂಕ ಮನೆಮಾಡಿದೆ.
ಉದ್ಯೋಗ ಕಳೆದುಕೊಳ್ಳುವ ಅಸಂಖ್ಯಾತರು ಕಳ್ಳತನ, ದರೋಡೆ, ಕೊಲೆ ಸುಲಿಗೆಯಂತಹ ದುಷ್ಕೃತ್ಯಗಳಿಗೆ ಕೈಹಾಕುವ ಆತಂಕವಿದೆ. ಇನ್ನು ವಿದ್ಯಾವಂತರು ಆನ್ ಲೈನ್ ಮೂಲಕ ಕನ್ನ ಹಾಕುವ ಪ್ರವೃತ್ತಿಯನ್ನೇ ವೃತ್ತಿಯಾಗಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

 

Leave a Comment