ವಿಶೇಷತೆಗಳ ’ರಾಗ’

ಪಿ.ಸಿ ಶೇಖರ್ ನಿರ್ದೇಶನದ ’ರಾಗ’ ಚಿತ್ರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಆರಂಭದಲ್ಲಿ ಚಿತ್ರ ಪೋಸ್ಟರ್ ಅನ್ನು ಶಿವರಾಜ್ ಕುಮಾರ್ ಅನಾವರಣ ಮಾಡಿದ್ದರು. ಈಗ ನಟ ದರ್ಶನ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಮತ್ತೊಂದು ವಿಶೇಷ ಎಂದರೆ ನಟ ಸುದೀಪ್ ಟ್ರೈಲರ್‌ಗೆ ಧ್ವನಿಗೂಡಿಸಿದ್ದಾರೆ.

ಹಾಸ್ಯ ಕಲಾವಿದರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಿತ್ರ, ಇದೇ ಮೊದಲ ಭಾರಿಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಜೊತೆಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಅಂಧರಾಗಿ ಭಾಮ ಕೂಡ ಕಾಣಿಸಿಕೊಳ್ಳುವ ಮೂಲಕ ಮಿತ್ರಗೆ ಸಾಥ್ ನೀಡಿದ್ದಾರೆ.

ಚಿತ್ರದಲ್ಲಿ ತಬಲನಾಣಿ, ಅವಿನಾಶ್, ರಮೇಶ್ ಭಟ್,ರೂಪಿಕಾ ಸೇರಿದಂತೆ ಮತ್ತಿತರ ತಾರಾಗಣವಿದೆ. ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ದರ್ಶನ್, ರಾಗ ಒಳ್ಳೆಯ ಚಿತ್ರವಾಗಲಿ. ಚಿತ್ರತಂಡಕ್ಕೂ ಹೆಸರು ತರಲಿ ಎಂದು ಶುಭ ಹಾರೈಸಿದರು.

’ರಾಗ’ ಕಥೆ ಹುಟ್ಟಲೂ ಒಂದು ಕಾರಣವಿದೆ. ಒಮ್ಮೆ ಚಿತ್ರವೊಂದರ ಚಿತ್ರೀಕರಣಕ್ಕೆ ಭಾವನ ಜೊತೆ ಪಿಸಿ ಶೇಖರ್ ಹೋಗಿದ್ದರು. ಅಲ್ಲಿ ತಮಿಳಿನ ನಟರಾದ ವಿಕ್ರಂ, ಸೂರ್ಯ ಮತ್ತು ನಿರ್ದೇಶಕ ಬಾಲ ಜೊತೆ ಊಟ ಮಾಡುವ ಸಮಯದಲ್ಲಿ ಈ ರೀತಿಯ ಕಥೆಯೇ ನಾನೂ ಮಾಡಿಬಿಡುತ್ತೇನೆ ಎನ್ನುತ್ತಿದ್ದಂತೆ ಎಲ್ಲರೂ ಗೊಳ್ ಎಂದು ನಕ್ಕರಂತೆ, ಇದನ್ನೇ ಗಂಭೀರವಾಗಿ ತೆಗೆದುಕೊಂಡ ಶೇಖರ್ ಕಿರು ಚಿತ್ರ ಮಾಡಿ ಅದಕ್ಕೆ ಪ್ರಶಸ್ತಿಯನ್ನೂ ಪಡೆದರು. ವಿಷಯ ತಿಳಿದ ವಿಕ್ರಂ ಶೇಖರ್ ಬೆನ್ನುತಟ್ಟಿ, ಕುರುಡನ ಕಥೆ ಮಾಡು ಇಷ್ಟವಾದರೆ ಮಾಡುತ್ತೇನೆ ಎಂದಿದ್ದರಂತೆ ಅದರಂತೆ ೨೦೦೨ರಲ್ಲಿ ಅವರಿಗಾಗಿ ಮಾಡಿದ್ದ ಕಥೆ ಈಗ ಮಿತ್ರ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ.

ನಿರ್ದೇಶಕ ಪಿಸಿ ಶೇಖರ್, ರಾಗ ಕಲಾತ್ಮಕ ಚಿತ್ರವಲ್ಲ. ಕಮರ್ಷಿಯಲ್ ಚಿತ್ರ. ಹೀಗಾಗಿ ಟ್ರೈಲರ್ ಬಿಡುಗಡೆಗೆ ದರ್ಶನ್ ಬರಬೇಕೆಂಬ ಆಸೆ ಇತ್ತು ಅದರಂತೆ ಅವರು ಬಂದು ಹರಸಿದ್ದಾರೆ. ಮಿತ್ರ ಅದ್ಬುತವಾಗಿ ನಟಿಸಿದ್ದಾರೆ.ಒಳ್ಳೆಯ ಕಮರ್ಷಿಯಲ್ ಚಿತ್ರವಾಗಲಿದೆ. ಸದ್ಯದಲ್ಲಿಯೇ ಚಿತ್ರದ ಮೊದಲ ಕಾಪಿ ಬರಲಿದ್ದು ತಿಂಗಳಾಂತ್ಯಕ್ಕೆ ತೆರೆಗೆ ತರುವ ಆಲೋಚನೆ ಇದೆ.

ಪ್ರೀತಿ ಎಂದರೆ ಅದು ಎರಡು ಮನಸ್ಸುಗಳು ಸೇರಿ ಆಗುವಂತಹುದು. ಆಗ ಬಣ್ಣ, ಭಾಷೆ ಅಡ್ಡಿಯಾಗುವುದಿಲ್ಲ. ಚಿತ್ರ ನಿರೀಕ್ಷೆಗಿನ್ನ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಎರಡು ವಿಶೇಷತೆಗಳಿವೆ ಅದರಲ್ಲಿ ಒಂದು ನಟನೆ ಮತ್ತೊಂದು ತಂತ್ರಜ್ಞಾನದ ಬಳಕೆ ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ. ಎನ್ನುವ ವಿಶ್ವಾಸ ಶೇಖರ್ ಅವರದು.

ನಟ ಕಮ್ ನಿರ್ಮಾಪಕ ಮಿತ್ರ ಮಾತನಾಡಿ, ೧೦೫ ಚಿತ್ರಗಳಲ್ಲಿ ನಟಿಸಿದ್ದೇನೆ. ನಿರ್ದೇಶಕ ಪಿ.ಸಿ ಶೇಖರ್ ಹೇಳಿದ ಕತೆ ಇಷ್ಟವಾಯಿತು. ಅವರು ೨೦೦೨ರಲ್ಲಿ ವಿಕ್ರಂ ಅವರಿಗೆ ಮಾಡಿದ್ದರು.ಕಥೆ ಕೇಳಿ ಚಿತ್ರ ಮಾಡೋಣ ಎಂದಾಗ ಅವರು ಅಳುಕಿನಿಂದಲೇ ಒಪ್ಪಿಕೊಂಡರು. ಈಗ ಚಿತ್ರ ಪೂರ್ಣಗೊಂಡಿದೆ. ಬಿಡುಗಡೆಯ ಹಂತಕ್ಕೆ ಬಂದಿದೆ. ನಾನು ನಟ ಎಂದಾಗ ಹಲವು ನಟಿಯರು ನಟಿಸುವುದಿಲ್ಲ ಎಂದರು ಕಥೆ ಕೇಳಿ ಭಾಮ ಒಪ್ಪಿಕೊಂಡರು.ಅವರೂ ಕೂಡ ಮುದ್ದಾಗಿ ನಟಿಸಿದ್ದಾರೆ ಎಂದು ಹೇಳಿಕೊಂಡರು ಮಿತ್ರ.

Leave a Comment