ವಿವೇಕಾನಂದರ ಆದರ್ಶ ಯುವಕರಿಗೆ ಮಾದರಿಯಾಗಲಿ

ದಾವಣಗೆರೆ, ಆ. 25 – ದೇಶಕಟ್ಟುವಲ್ಲಿ ಯುವಕರ ಪಾತ್ರ ಮಹತ್ತರವಾದುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಗಬಾಲಯ್ಯ ಹೇಳಿದರು. ನಗರದ ಎಆರ್ ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ನಿಯಂತ್ರಣ ಘಟಕ, ಎಆರ್ ಜಿ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯುವದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಯುವಕರು ಆತಂಕದ ಕ್ಷಣದಲ್ಲಿದ್ದಾರೆ. ಏಕೆ ಎಂಬುದರ ಬಗ್ಗೆ ಮನಗಾಣಬೇಕು. ಯುವಜನತೆ ಎಲ್ಲಿ ಎಡವುತ್ತಿದ್ದಾರೆಂದು ಎಚ್ಚೆತ್ತುಕೊಳ್ಳಬೇಕು.

ದುಶ್ಚಟಗಳಿಗೆ ಬಲಿಯಾಗಬಾರದು. ಯುವಕರು ಗುಟ್ಕಾ, ಮದ್ಯಪಾನ, ಡ್ರಗ್ಸ್ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ವಿಷಾಧನೀಯ. ಒಂದು ಬಾರಿ ದುಶ್ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟವಾಗುತ್ತದೆ.ಇದರಿಂದ ಜೀವನವೇ ಹಾಳಾಗುತ್ತದೆ. ಸಮಾಜ ಪರಿವರ್ತನೆಯಾಗಬೇಕಾದರೆ ನಾವು ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ನೀಡಲಾಗುತ್ತದೆ. ಎಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಮೊದಲು ನಾವು ಪರಿವರ್ತನೆಯಾಗಬೇಕು. ಪ್ರತಿಯೊಬ್ಬ ಯುವಕರು ವಿವೇಕಾನಂದರ ಚರಿತ್ರೆಗಳನ್ನು ಓದಬೇಕು. ಕೇವಲ ಪದವಿಗಳನ್ನು ಪಡೆದುಕೊಂಡರೆ ಸಾಲದು ಮಹಾಭಾರತ, ರಾಮಾಯಣ ಕಥೆಗಳನ್ನು ಓದಬೇಕು. ಸ್ವಾಮಿವಿವೇಕಾನಂದವರು ಅತೀ ಚಿಕ್ಕವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಸ್ವಾಮಿ ವಿವೇಕಾನಂದರ ಆಲೋಚನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು.

ಕೇವಲ ಪುಸ್ತಕಗಳನ್ನು ಓದಿದರೆ ಸಾಲದು ಉತ್ತಮ ವ್ಯಕ್ತಿಗಳ ಚರಿತ್ರೆಗಳನ್ನು ಒದಬೇಕು. ಯುವಕರು ಕುಟುಂಬದ ಜವಾಬ್ದಾರಿ ತೆಗೆದುಕೊಂಡರೆ ದಾರಿ ತಪ್ಪುವುದು ಕಡಿಮೆಯಾಗುತ್ತದೆ. ಕುಟುಂಬ ನಿರ್ವಹಣೆ ಮಾಡಿದರೆ ದೇಶ ನಿರ್ವಹಣೆ ಮಾಡಲು ತಾವಾಗಿಯೇ ಮುಂದೆ ಬರುತ್ತಾರೆ. ಯೋಗಾ,ಧ್ಯಾನದಂತಹ ಉತ್ತಮವಾದ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಯುವಕರಲ್ಲಿರುವ ಯೋಚನೆ, ಆಲೋಚನೆಗಳು ಭಾವನೆಗಳು ಬದಲಾಗಬೇಕು. ಯುವಕರು ಮನಸ್ಸನ್ನು ಯುವಚೈತನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಿವಿ ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಾಪಕ ವೇದಿಕೆಯ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ್ ಹಲಸಂಗಿ ಮಾತನಾಡಿ, ಯುವಕರಿಗೆ ಸುರಕ್ಷಿತವಾದ ತಾಣ ಸಮಾಜ. ಅದೇ ಸಮಾಜದಲ್ಲಿ ಯುವಕರು ಇಂದು ಆತಂಕಪಡುವ ಪರಿಸ್ಥಿತಿಯಲ್ಲಿದ್ದಾರೆ. ಶಿಕ್ಷಣದ ಮುಖ್ಯ ಉದ್ದೇಶ ಉಪದೇಶ, ಚರಿತ್ರೆ ನಿರ್ಮಾಣ ಮಾಡುವುದು. ಶಿಕ್ಷಣ ಮನೋವಿಕಾಸಕ್ಕೆ ಪೂರಕವಾದುದು. ಯುವಜನತೆ ದಾರಿತಪ್ಪದೆ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಬಸವಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎಸ್.ತ್ರಿಪುಲಾಂಬ, ಎಆರ್ ಜಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಬಸವರಾಜಪ್ಪ, ಡಾ.ರಾಘವನ್, ಪ್ರೊ.ಬೊಮ್ಮಣ್ಣ, ಮಲ್ಲಿಕಾರ್ಜುನಪ್ಪ ಸೇರಿದಂತೆ ಮತ್ತಿತರರಿದ್ದರು.

Leave a Comment