ವಿವೇಕಾನಂದರು ದೇಶದ ಸಂಸ್ಕೃತಿ ಜಗತ್ತಿಗೆ ಸಾರಿದ್ದರು

ರಾಯಚೂರು.ಸೆ.11- ಸ್ವಾಮಿ ವಿವೇಕಾನಂದರು ದೇಶದ ಸಂಸ್ಕೃತಿಯನ್ನು ಜಗತ್ತಿಗೆ ಪ್ರಚುರ ಪಡಿಸಿದ ಮಹಾನ್ ದಾರ್ಶನಿಕರೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.
ಅವರಿಂದು ಸ್ಥಳೀಯ ರಂಗಮಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125 ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಭಾಷಣ ಮಾಡಲು ತೆರಳಿದಾಗ ಅಲ್ಲಿನ ಜನರು ಅವರನ್ನು ಕೀಳಾಗಿ ನೋಡಿದ್ದರು. ವಿವೇಕಾನಂದರು ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಮಾಡಿ, ಇಂದಿಗೆ 125 ವರ್ಷ ಗತಿಸುತ್ತಿರುವ ಸಂದರ್ಭದಲ್ಲಿ ಸರ್ಕಾರವೂ ಈ ಕುರಿತು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ, ಸ್ವಾಮಿ ವಿವೇಕಾನಂದ ಗುಣಗಳನ್ನು ಪ್ರಚುರಪಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಮುನ್ನುಗ್ಗಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವೆಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ವಿವೇಕಾನಂದರ ಬರೆದಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ವಿವೇಕಾನಂದರ ಜೀವನ ಚರಿತ್ರೆಯುಳ್ಳ ಪುಸ್ತಕ ಓದುವುದರಿಂದ ಏಕಾಗ್ರತೆ, ಆತ್ಮಶಕ್ತಿ ಮತ್ತು ಸಾಧಿಸುವ ಛಲ ವೃದ್ಧಿಯಾಗಲಿದೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ನೀಲಮ್ಮ, ಬಸವರಾಜ ಬೋರೆಡ್ಡಿ, ಮಂಜುನಾಥ ಸ್ವಾಮಿ, ದಂಡಪ್ಪ ಬಿರಾದರ, ವೈಷ್ಣವಿ ಜೋಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment