ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು. ಜೂ.30- ಜಿಲ್ಲೆ ತಿ.ನರಸೀಪುರ ಪುರಸಭೆಯಲ್ಲಿ ಖಾಯಂ ಪೌರಕಾರ್ಮಿಕರ ಹುದ್ದೆಗೆ ಸವರ್ಣೀಯರು ಅಕ್ರಮವಾಗಿ ನೇಮಕಗೊಂಡು ಸ್ವಚ್ಛತಾ ಕೆಲಸ ಮಾಡದೇ ಸರ್ಕಾರಿ ನಿಯಮ ಉಲ್ಲಂಘಿಸಿ ವೇತನ ಪಡೆಯುತ್ತಿರುವ 6ಮಂದಿಯನ್ನು ಕರ್ತವ್ಯದಿಂದ ಕೂಡಲೇ ವಜಾ ಮಾಡಿ ಮುಖ್ಯಾಧಿಕಾರಿಯಾದ ಅಶೋಕ್ ಅವರ ಮೇಲೆ ಸಮಗ್ರ ತನಿಖೆ ನಡೆಸಬೇಕೆಂದು ಮತ್ತು ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪುನರ್ ಅವಲೋಕನ ರಾಜ್ಯ ಸಮಿತಿ, ಪೌರಕಾರ್ಮಿಕರ ಅಸಂಘಟಿತ ಕಾರ್ಮಿಕ ವಿಭಾಗದಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಒಟ್ಟುಖಾಯಂ 16 ಹುದ್ದೆಗಳಲ್ಲಿ 10ಜನ ಖಾಯಂ ಪೌರಕಾರ್ಮಿಕ ಹುದ್ದೆಗಳ ಪೈಕಿ 4ಜನ ಆದಿದ್ರಾವಿಡ ಜನಾಂಗಕ್ಕೆ ಸೇರಿದವರಾಗಿದ್ದು ಇವರು ಹಾಲಿ ಸ್ವಚ್ಛತಾ ಕೆಲಸವನ್ನು ಪುರಸಭೆಯ ವಾರ್ಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 6ಮಂದಿ ನಟರಾಜು, ಸವಿತಾ ಕೋಂ ಲೇ.ಸಿದ್ದರಾಜು, ಆರ್ ಬಸವರಾಜು, ಎಂ ಲಿಂಗರಾಜು, ಬಿ.ಬಿ ಗೋಪಾಲಕೃಷ್ಣ, ಸೋಮಣ್ಣ ಇವರು ಸವರ್ಣೀಯ ಿತರೇ ಜನಾಂಗದವರಾಗಿದ್ದು ಸರ್ಕಾರದ ಖಾಯಮ್ಮಾತಿ ಪೌರಕಾರ್ಮಿಕ ಹುದ್ದೆಯಲ್ಲಿ ಪೌರಾಡಳಿತ ಇಲಾಖೆಯ ನೇಮಕಾತಿ ಮಾಡಿ 11/12/2014ರಿಂದ ಇಲ್ಲಿ ತನಕ ಸಹ ಸ್ವಚ್ಛತಾ ಕೆಲಸ ಮಾಡದೇ ಪುರಸಭೆ ಕಛೇರಿಯಲ್ಲಿ ಕಾಲಕಳೆಯುತ್ತ ಪ್ರತಿ ತಿಂಗಳು ವೇತನ ಪಡೆಯುತ್ತ ಸರ್ಕಾರವನ್ನು ವಂಚಿಸುತ್ತಾ ಬಂದಿದ್ದಾರೆಂದು ಆರೋಪಿಸಿದರು.
ತಿ.ನರಸೀಪುರ ಪುರಸಭೆಯ ಮುಖ್ಯಾಧಿಕಾರಿಗಳಾದ ಅಶೋಕ್ ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಗೊಂಡಿರುವ ಖಾಯಂ ಪೌರಕಾರ್ಮಿಕರ ಕೆಲಸ ಮಾಡಿಸದೇ ತಮಗೆ ಬೇಕಾದ ಸ್ಥಳಗಳಿಗೆ ನಿಯೋಜನೆ ಕರ್ತವ್ಯ ಮಾಡುವಂತೆ ಹೇಳಿ ಅವರಿಗೆ ವೇತನ ಮತ್ತು ಇತರೇ ಭತ್ಯೆಗಳು ಎಲ್ಲಾ ಸೌಲಭ್ಯಗಳನ್ನು ಕೊಡಿಸುವ ಮೂಲಕ ಶಾಮೀಲಾಗಿ ಮುಂದುವರೆಸುತ್ತಿದ್ದಾರೆಂದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ 6ಮಂದಿಯನ್ನು ಖಾಯಂ ಪೌರಕಾರ್ಮಿಕ ಹುದ್ದೆಯಿಂದ ವಜಾಗೊಳಿಸಿ ಈ ಹುದ್ದೆಗಳಿಗೆ ಸರ್ಕಾರದ ಆದೇಶದಂತೆ ಹೊಸದಾಗಿ 6ಮಂದಿಯನ್ನು ಪೌರಕಾರ್ಮಿಕಹುದ್ದೆಗಳಿಗೆ ಪುನರ್ ನೇಮಿಸುವಂತೆ ಒತ್ತಾಯಿಸಿದರು.
ಅಶೋಕ್ ಅವರನ್ನು ಅಮಾನತಿನಲ್ಲಿಟ್ಟು ಸಮಗ್ರ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಸವರ್ಣೀಯರು ಪೌರಕಾರ್ಮಿಕ ಖಾಯಂ ಹುದ್ದೆಗಳಿಗೆ ನೇಮಕಾತಿಗೊಂಡಿದ್ದು ಸ್ವಚ್ಛತಾ ಕಾರ್ಯನಿರ್ವಹಿಸದೇ ವಂಚಿಸಿದ್ದು ಕ್ರಮ ಕೈಗೊಳ್ಳಿ, 9ಮಂದಿಗೆ ಬಾಕಿ ಉಳಿಸಿಕೊಂಡಿರುವ ತುಟ್ಟಿಭತ್ಯೆಯ ಹಣವನ್ನು ಕೂಡಲೇ ಮಂಜೂರು ಮಾಡಿ, ಆದಿ ದ್ರಾವಿಡ ಪೌರಕಾರ್ಮಿಕರಿಗೆ ಪ್ರತ್ಯೇಕ ಸಮುದಾಯ ಭವನ ನಿರ್ಮಿಸಲು ಪ್ರತ್ಯೇಕ ನಿವೇಶನ ಮಂಜೂರು ಮಾಡಿಸಿ. ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 7ತಾಲೂಕಿನ ಗ್ರಾ.ಪಂಗಳಲ್ಲಿ ಕೆಲಸ ಮಾಡುತ್ತಿರುವ ಪೌರಕರ್ಮಿಕರಿಗೆ ವೇತನ ನೀಡದೆ ಇರುವುದರಿಂದ ಈ ಕೂಡಲೇ ಎಲ್ಲ ಪೌರಕಾರ್ಮಿಕರಿಗೂ ವೇತನ ಮಂಜೂರಾತಿ ಮಾಡಿಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್, ಅಶೋಖಪುರಂ ಫೈಲ್ವಾನ್ ಕೃಷ್ಣ, ಆರ್ಟಿಸ್ಟ್ ಎಸ್.ನಾಗರಾಜು, ಡಿ.ಎನ್.ಬಾಬು, ಆರ್.ಚಕ್ರಪಾಣಿ, ಮೈಸೂರು ಮಹದೇವು, ಎನ್ ಪಿ ಗುರುಮೂರ್ತಿ, ಮಾದ, ಸೋಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Share

Leave a Comment