ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗೌರಿಶಂಕರ್ ಚಾಲನೆ

ತುಮಕೂರು, ಅ. ೧೨- ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು ಹಾಗೂ ಊರ್ಡಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕರು ಸತತ ಮೂರನೇ ದಿನವು ಪ್ರವಾಸ ಕೈಗೊಂಡು ಹಲವು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಚಾಲನೆ ನೀಡಿದರು.

ತುಮಕೂರು ಗ್ರಾಮಾಂತರದ ಗೂಳೂರು ಜಿ.ಪಂ. ವ್ಯಾಪ್ತಿಯ ಗೂಳಹರಿವೆ, ಕಿತ್ತಗಾನಹಳ್ಳಿ, ಪಾಲಸಂದ್ರ, ಜೋಲುಮಾರನಹಳ್ಳಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಕೌತುಮಾರನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಕೆಸರಮಡು ಪಂಚಾಯ್ತಿಯ ಬೊಮ್ಮನಹಳ್ಳಿ, ಮಸ್ಕಲ್ ಪಂಚಾಯ್ತಿಯ ಸಾಸಲು ಗ್ರಾಮದ ಎಸ್.ಟಿ. ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪೂಜೆ, ನಂತರ ಮಸ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಣೆ ಮಾಡಿ, ಊರ್ಡಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಿಕ್ಕಲ್, ಕೆಂಪೊಹಳ್ಳಿ, ಕಾಳೇನಹಳ್ಳಿ, ಸೀತಕಲ್ ಬೋವಿಪಾಳ್ಯ, ಹಾಗೂ ಹಿರೇದೊಡ್ಡವಾಡಿ ಗ್ರಾಮಗಳಲ್ಲಿ ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಗೂಳೂರು ಭಾಗದಲ್ಲಿ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಅವುಗಳನ್ನು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡಿಸಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ವಿರೋಧ ಪಕ್ಷದವರು ಅನಗತ್ಯವಾಗಿ ಟೀಕೆ ಮಾಡಿದರೆ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊನ್ನುಡಿಕೆ ಗ್ರಾಮದಲ್ಲಿನ ತಿಗಳ ಸಮುದಾಯ ಭವನಕ್ಕೆ 1.5 ಕೋಟಿ ರೂ.ಅನುದಾನ ನೀಡುವ ಭರವಸೆ ನೀಡಿ, ತಿಗಳ ಸಮುದಾಯದ ಮತ ಪಡೆಯಲು ಹುನ್ನಾರ ನಡೆಸಿದ ವ್ಯಕ್ತಿ ಇಂದು ಜನರು ಕೊಟ್ಟ ತೀರ್ಪಿನಿಂದ ಮನೆ ಸೇರುವಂತಾಗಿದೆ. ಸಮುದಾಯ ಭವನಕ್ಕೆ ಅನುದಾನ ನೀಡುವ ಭರವಸೆ ನೀಡಿ ಇಡೀ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ.

ಈಗಾಗಲೇ ಈ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ತಿಗಳ ಸಮುದಾಯದ ಮುಖಂಡರು ಒಟ್ಟಾಗಿ ಚರ್ಚಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಸರ್ಕಾರದ ಜತೆ ಮಾತನಾಡಿ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ರಾಜ್ಯದ ಜನರಿಗೆ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಜಾತ್ಯಾತೀತ ಹಾಗೂ ಪಕ್ಷಾತೀತ ಆಡಳಿತ ನೀಡುತ್ತಿದ್ದಾರೆ. ರಾಜ್ಯದ ಸಾಮಾನ್ಯ ವ್ಯಕ್ತಿಯು ಸಹ ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯಕ್ರಮಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಳ್ಳಬಹುದಾಗಿದೆ. ಇಂತಹ ಜನಪರ ಕಾಳಜಿಯುಳ್ಳ ಮುಖ್ಯಮಂತ್ರಿಗಳನ್ನು ಪಡೆದಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ ಎಂದರು.

ಸರ್ಕಾರ ರಚನೆಯಾಗಿ 4 ತಿಂಗಳು ಗತಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ರೈತರ ಸಾಲಮನ್ನಾ ಮಾಡಿ ರೈತರನ್ನು ಋಣ ಮುಕ್ತರಾಗಿಸಿದ್ದಾರೆ. 70 ವರ್ಷ ಮೇಲ್ಪಟ್ಟ ವೃದ್ಧರಿಗೆ ನೀಡುವ ಸಂಧ್ಯಾ ಸುರಕ್ಷಾ ಮಾಸಾಶನವನ್ನು 600 ರಿಂದ 1000 ರೂಗಳಿಗೆ ಹೆಚ್ಚಳ ಮಾಡಿದ್ದಾರೆ. ಕ್ಷೇತ್ರದ ಜನತೆ ಎಲ್ಲವನ್ನೂ ಒಟ್ಟಿಗೆ ಬಯಸಬಾರದು. ಒಂದು ವರ್ಷ ಕಾಲಾವಕಾಶ ನೀಡಿ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಅನುದಾನವನ್ನು ತಂದು ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಭರವಸೆ ನೀಡಿದರು.

ಏತ ನೀರಾವರಿ ಯೋಜನೆಗೆ ಒಳಪಡಿಸಿರುವ 49 ಕೆರೆಗಳನ್ನು ತುಂಬಿಸಲು 300 ಎಂಸಿಎಫ್‌ಟಿ ನೀರಿನ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಇದರಿಂದ ಕೇವಲ 1 ಕೆರೆಯನ್ನು ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಕೆರೆಗಳನ್ನು ತುಂಬಿಸಲು ನೀರಿನ ಪ್ರಮಾಣವನ್ನು 1 ಟಿಎಂಸಿಗೆ ಹೆಚ್ಚಳ ಮಾಡಬೇಕಾಗಿದೆ. ಏತ ನೀರಾವರಿ ಯೋಜನೆಗೆ ಈಗ ಅಳವಡಿಸಿರುವ ಪೈಪ್‌ಲೈನ್‌ನಿಂದ ಅಗತ್ಯವಿರುವ ನೀರು ತರುವುದು ಅಸಾಧ್ಯ. ಎಲ್ಲಾ ಕೆರೆಗಳಿಗೂ ಅಗತ್ಯವಿರುವ ನೀರು ತರಲು ಹೊಸ ಪೈಪ್‌ಲೈನ್ ನಿರ್ಮಾಣ ಮಾಡಬೇಕಿದ್ದು, ಇನ್ನು 15 ದಿನಗಳಲ್ಲಿ 1 ಟಿಎಂಸಿ ನೀರನ್ನು ಗ್ರಾಮಾಂತರ ಭಾಗಕ್ಕೆ ತರುವುದಾಗಿ ವಾಗ್ದಾನವಿತ್ತರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ಮುಖಂಡರಾದ ಪಾಲನೇತ್ರಯ್ಯ, ರಾಮಚಂದ್ರಪ್ಪ, ವೈ.ಟಿ.ನಾಗರಾಜು, ಕೆಂಪರಾಜು, ಆಜಮ್, ಹಿರೇಹಳ್ಳಿ ಮಹೇಶ್, ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment