ವಿವಿಗಳಿಗೆ ಮೂಗುದಾರ ಎಬಿವಿಪಿ ವಿರೋಧ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜೂ. ೧೯- ಸಾರ್ವಜನಿಕರು, ಶಿಕ್ಷಣ ತಜ್ಞರು ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚಿಸದೆ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2017 ವಿಧೇಯಕವನ್ನು ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿದೆ.

ರಾಜ್ಯದ ಲಕ್ಷಾಂತರ ವಿಧ್ಯಾರ್ಥಿಗಳ ಭವಿಷ್ಯ ರೂಪಿಸುವ ಹಾಗೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ದೂರದೃಷ್ಠಿ ನೀಡಬೇಕಾದ ವಿದೇಯಕವನ್ನು ಯಾವುದೇ ಚರ್ಚೆ ಹಾಗೂ ಸಂವಾದವಿಲ್ಲದೆ ಜಾರಿಗೆ ತರಲು ಹೊರಟಿರುವ ಸರ್ಕಾರದ ನಿರ್ಧಾರ ಪ್ರಜಾತಂತ್ರ ವ್ಯವಸ್ಥೆ ವಿರೋಧಿ ಎಂದು ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿಶ್ವ ವಿದ್ಯಾನಿಲಯಗಳ ಸ್ವಾಯುತ್ತತೆಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ಈ ವಿದೇಯಕ ಜಾರಿಯಿಂದ ವಿವಿಗಳಿಗೆ ರಾಜಕೀಯ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ವಿವಿಗಳ ಕುಲಪತಿ ನೇಮಕಾತಿ ಸಂದರ್ಭದಲ್ಲಿ ಸರ್ಕಾರ, ಸಿಂಡಿಕೇಟ್, ಯುಜಿಸಿ ರಾಜ್ಯಪಾಲರ ಶೋಧನ ಸಮಿತಿಗೆ ನಾಮ ನಿರ್ದೇಶನ ಮಾಡುವಾಗ ಸರ್ಕಾರದ ಕಡೆಯಿಂದ ಇಬ್ಬರು ನಾಮ ನಿರ್ದೇಶಿತ ಸದಸ್ಯರ ನೇಮಕಕ್ಕೆ ಮುಂದಾಗುವ ಮೂಲಕ ಸರ್ಕಾರ ಕುಲಪತಿ ನೇಮಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇದು ಕುಲಾಧಿಪತಿಗಳ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಕ್ರಮ ಹಾಗೂ ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿದೆ ಎಂದರು.

ಒಂದು ಕೋಟಿಗಿಂತಲೂ ಹೆಚ್ಚು ವೆಚ್ಚದ ಕಾಮಗಾರಿ ನಡೆಸಲು ವಿವಿಗಳು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಇದು ವಿವಿ ಸ್ವಾಯುತ್ತತೆಗೆ ಧಕ್ಕೆ ತರಲಿದೆ. ಈ ಮೂಲಕ ನೇರವಾಗಿ ಸರ್ಕಾರ ವಿವಿಗಳ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕುಲಸಚಿವರ ಹುದ್ದೆಗೆ ಆಡಳಿತಾತ್ಮಕ ಸೇವೆಯ ಅಧಿಕಾರಿಗಳ ನೇಮಕಕ್ಕೆ ಮುಂದಾಗಿರುವುದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸೇವೆಗಳ ನಡುವಿನ ಸಂಘರ್ಷಕ್ಕೆ ದಾರಿಯಾಗಲಿದೆ ಎಂದರು.

ವಿವಿಗಳು ಸ್ವಯತ್ತ ಸಂಸ್ಥೆಯಾಗಿರಬೇಕೇ ಹೊರತು, ಸರ್ಕಾರದಡಿಯ ಸಂಸ್ಥೆಯಾಗಬಾರದು ಎಂದ ಅವರು, ಎನ್.ಆರ್. ಶೆಟ್ಟಿ ಸಮಿತಿಯ ವರದಿ ಅನ್ವಯ ರಾಜ್ಯದ ಎಲ್ಲಾ ವಿವಿಗಳನ್ನು ಒಂದೇ ಸೂರಿನಡಿ ತರಬೇಕಾದ ಅವಶ್ಯಕತೆ ಇದೆ. ಆದರೆ, ಸರ್ಕಾರ ತನಗೆ ಬೇಕಾದ ರೀತಿಯಲ್ಲಿ ವಿದೇಯಕ ತಯಾರಿಸಿದೆ. ಹಂಪಿ ಕನ್ನಡ ವಿವಿ ರೀತಿಯಲ್ಲಿ ಮಹಿಳಾ ವಿವಿಗಳು ಮಹಿಳೆಯರ ಸ್ಥಿತಿ-ಗತಿಗಳ ಅಧ್ಯಾಯನದ ಸಮಗ್ರ ವಿಕಾಸ ಕೇಂದ್ರಿತ ವಿಷಯಗಳ ಕುರಿತಂತೆ ಬೆಳಕು ನೀಡಬೇಕಾದ ಸ್ವಯುತ್ತ ಸಂಸ್ಥೆಯಾಗಬೇಕು ಎಂದರು.

Leave a Comment