ವಿವಿಗಳಲ್ಲಿ ಹಿಂಸಾಚಾರ ಮುಕ್ತ ವಾತಾವರಣ ನಿರ್ಮಾಣವಾಗಲಿ : ರಾಷ್ಟ್ರಪತಿ ಆಶಯ

ನವದೆಹಲಿ, ಮಾ. ೨೦ – ಪ್ರಾಚೀನ ವಿಶ್ವವಿದ್ಯಾಲಯಗಳಾದ ನಳಂದ ಮತ್ತು ತಕ್ಷಶಿಲಾಗಳಂತೆ ಹಿಂಸಾಚಾರ ಮತ್ತು ಪೂರ್ವಾಗ್ರಹ ಮುಕ್ತ ಶ್ರೀಮಂತ ಪರಂಪರೆಯನ್ನು ಆಧುನಿಕ ವಿಶ್ವವಿದ್ಯಾಲಯಗಳು ರೂಢಿಸಿಕೊಳ್ಳುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದಿಲ್ಲಿ ಕರೆ ನೀಡಿದ್ದಾರೆ. ಬಿಹಾರದ ನಳಂದಾದಲ್ಲಿ ಅವರು ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಸಮಾರೋಪ ಭಾಷಣ ಮಾಡುತ್ತಿದ್ದರು.

ವಾಕ್ ಸ್ವಾತಂತ್ರ್ಯ ಕುರಿತಂತೆ ಕಾವೇರಿದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಶಾಂತ ಸಂಸ್ಕೃತಿಗೆ ರಾಷ್ಟ್ರಪತಿ ಕರೆ ನೀಡಿದ್ದಾರೆ.

‘ವಿಶ್ವವಿದ್ಯಾಲಯದಲ್ಲಿ, ಶಿಕ್ಷಣ ಸಂಸ್ಥೆಯಲ್ಲಿ ಮುಕ್ತ ವಾತಾವರಣವಿಲ್ಲದಿದ್ದರೆ, ನಾವು ನಮ್ಮ ವಿದ್ಯಾರ್ಥಿಗಳಿಗೆ ಯಾವ ಬಗೆಯ ಪಾಠ ಹೇಳುತ್ತಿದ್ದೇವೆ? ಪೂರ್ವಗ್ರಹ, ಆಕ್ರೋಶ, ಹಿಂಸಾಚಾರ ಸಂಸ್ಕೃತಿಗಳಿಂದ ಮುಕ್ತವಾದ ವಾತಾವರಣ ಇರಬೇಕು, ಬೌದ್ಧಿಕತೆಗೆ ಹಾದಿ ಮಾಡಿಕೊಡುವ ಅವಕಾಶಗಳಿರಬೇಕು’ ಎಂದವರು ಹೇಳಿದರು.

ಶಿಕ್ಷಣ ಎಂದರೆ ಅದು ಮುಖ್ಯವಾಗಿ ಬೌದ್ಧಿಕತೆಯನ್ನು ವಿಸ್ತರಿಸುವ ಶಿಕ್ಷಕರು ಮತ್ತು ಸಹ ವಿದ್ಯಾರ್ಥಿಗಳೊಡನೆ ನಿರಂತರ ಸಂವಾದವಾಗಿರಬೇಕು. ವರದಿಗಳ ಪ್ರಕಾರ ಪ್ರಾಚೀನ ವಿಶ್ವವಿದ್ಯಾಲಯಗಳಾದ ನಳಂದ, ತಕ್ಷಶಿಲಾ ಮತ್ತು ವಿಕ್ರಮ ಶಿಲಾ ವಿಶ್ವವಿದ್ಯಾಲಯಗಳಿಗೆ ಜಗತ್ತಿನಾದ್ಯಂತ ಮಹಾನ್ ವ್ಯಕ್ತಿಗಳು ಬರುತ್ತಿದ್ದರು.

ಇವು ಕೇವಲ ವಿಶ್ವವಿದ್ಯಾಲಯಗಳಾಗಿರದೆ ಭಾರತ, ಗ್ರೀಸ್, ಪರ್ಶಿಯಾ ಮತ್ತು ಚೀನೀ ಸಂಸ್ಕೃತಿಗಳ ಸಂಗಮವಾಗಿದ್ದವು.

ಈ ಎಲ್ಲಾ ವಿಶ್ವವಿದ್ಯಾಲಯಗಳು ಮಾಡುತ್ತಿದ್ದ ಪ್ರಮುಖ ಕೆಲಸವೆಂದರೆ ಮುಕ್ತ ಚರ್ಚೆಗಳನ್ನು ಏರ್ಪ‌ಡಿಸುತ್ತಿದ್ದುದು ಇಲ್ಲಿನ ಶಿಕ್ಷಕರು ಪ್ರಶ್ನೆಗಳನ್ನು ಹಾಗೂ ಮರು ಪ್ರಶ್ನೆಗಳನ್ನು ಕೇಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಇದೆಲ್ಲದರ ನಂತರ ಒಂದು ಸರ್ವಸಮ್ಮತ ನಿರ್ಧಾರಕ್ಕೆ ಬರುತ್ತಿದ್ದರು ಎಂದವರು ಹೇಳಿದರು.

 

Leave a Comment