ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿಯಲ್ಲ- ಡಿಕೆಶಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು,ಆ. ೨೫- ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿ ನಾನಲ್ಲ. ನನಗೆ ಯಾವುದೇ ಅಧಿಕಾರ ಬೇಡ. ಅವಸರದಲ್ಲಿರುವವರಿಗೆ ಅಧಿಕಾರ ಸಿಗಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.
ಯಾರಿಗೆ ಕಾರು ಬೇಕೋ, ಯಾರಿಗೆ ಮನೆ ಬೇಕೋ, ಯಾರು ಅರ್ಜೆಟ್‌ನಲ್ಲಿದ್ದರೋ ಅವರು ವಿರೋಧ ಪಕ್ಷದ ನಾಯಕ ಸೇರಿದಂತೆ ಎಲ್ಲವೂ ಆಗಲಿ. ನನ್ನದೇನು ಅಭ್ಯಂತರವಿಲ್ಲ. ನನಗಂತೂ ಬೆಂಗಳೂರಿನಲ್ಲಿ ಪರ್ಮನೆಂಟ್ ಮನೆ ಇದೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಯಾರಾಗಬೇಕು ಎಂಬುದನ್ನು ನಿರ್ಧರಿಸಲು ವರಿಷ್ಠ ನಾಯಕರು ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯ ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವರು ಎಂದು ಅವರು ಹೇಳಿದರು.
ನಾನಂತೂ ಯಾವುದೇ ಅಧಿಕಾರ ಬಯಸಿಲ್ಲ ಎಂದು ಪುನರ್ ಉಚ್ಚರಿಸಿದ ಡಿ.ಕೆ. ಶಿವಕುಮಾರ್, ಯಾರಿಗೆ ಅವಸರವಿದಿಯೋ ಅವರಿಗೆ ಅಧಿಕಾರ ಸಿಗಲಿ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರತಿಕ್ರಿಯೆ ಇಲ್ಲ
ಸರ್ಕಾರ ಪತನಕ್ಕೆ ಸಿದ್ಧರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಿದ್ಧರಾಮಯ್ಯ, ದೇವೇಗೌಡರು, ಕುಮಾರಸ್ವಾಮಿ ಅವರ ಆರೋಪ ಪ್ರತ್ಯಾರೋಪಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಪೇಪರ್ ಓದುವುದನ್ನೇ ಬಿಟ್ಟಿದ್ದೇನೆ ಎಂದು ಹೇಳಿ, ಅಚ್ಚರಿ ಮೂಡಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈ ಕೆಳಗೆ 14 ತಿಂಗಳು ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಇಲಾಖಾ ಕೆಲಸಗಳಿಗೆ ನಾನು ಬದ್ಧನಾಗಿದ್ದೆ ಎಂದರು.

Leave a Comment