ವಿಮೆ ವ್ಯಾಪ್ತಿಗೆ ಕಾಫಿ: ರವಿ

ಬೆಂಗಳೂರು, ನ. ೧೩- ಕಾಫಿ ಬೆಳೆಗಾರರು ಒಪ್ಪುವುದಾದರೆ ಕಾಫಿ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲಾಗುವುದು. ಈ ಸಂಬಂಧ ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಇಂದಿಲ್ಲಿ ತಿಳಿಸಿದರು.
ನಗರದಲ್ಲಿ ಕಾಫಿ ಪ್ಲಾಂಟರ್ ಅಸೋಸಿಯೇಷನ್‌ನ ೬೧ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ನೆರೆಹಾವಳಿಯಿಂದ ಕಾಫಿ ಬೆಳೆ ಕೂಡ ನಾಶವಾಗಿದೆ. ಆದರೆ ಕೇಂದ್ರದ ಬೆಳೆ ವಿಮಾ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಪರ್ಯಾಯ ಮೊತ್ತವು ನಿರೀಕ್ಷಿಸದಷ್ಟು ಸಿಗುತ್ತಿಲ್ಲ ಎಂದು ಅವರು ಹೇಳಿದರು.
ಕಾಫಿ ಕೃಷಿ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾವ ಮಾಡಿದ್ದು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಅವರು ತಿಳಿಸಿದರು.
ಈ ಉದ್ಯಮವನ್ನು ನಂಬಿಕೊಂಡು ೧೦ ಲಕ್ಷ ಹೆಚ್ಚು ಮಂದಿ ಅವಲಂಬಿತರಾಗಿದ್ದಾರೆ. ಈ ಉದ್ಯಮಕ್ಕೆ ಪೆಟ್ಟು ಬಿದ್ದರೆ ಲಕ್ಷಾಂತರ ಮಂದಿಗೆ ಪರ್ಯಾಯ ಉದ್ಯೋಗವು ಕಲ್ಪಿಸುವುದು ಅಸಾಧ್ಯ ಎಂದು ಅವರು ತಿಳಿಸಿದರು.
ಕಾಫಿ ಉದ್ಯಮದ ಬಗ್ಗೆ ಸರ್ಕಾರಗಳಿಗೆ ಅನುಕಂಪ ಇಲ್ಲ. ಅಲ್ಲದೆ ಈ ಬೆಳೆಗಾರರು ಯಾವುದೇ ಲಾಬಿಗೆ ಮಾಡುವುದಿಲ್ಲ. ಅಡಿಕೆ ಬೆಳೆಗಾರರು ದೆಹಲಿಗೆ ತೆರಳಿ ಲಾಬಿ ಮಾಡುವುದರಿಂದ ಅವರ ಬೇಡಿಕೆಗಳೆಲ್ಲ ಈಡೇರುತ್ತದೆ ಎಂದು ಅವರು ತಿಳಿಸಿದರು.
ಕಾಫಿ ಬೆಳೆಗಾರರು ಸುರಕ್ಷತೆ ದೃಷ್ಠಿಯಿಂದ ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ. ಯಾರಿಗೆ ಕ್ರಿಮಿನಲ್ ಹಿನ್ನೆಲೆ ಇರುತ್ತದೆಯೋ ಅಂತಹವರ ಆಯುಧಗಳನ್ನು ವಶಪಡಿಸಿಕೊಳ್ಳಲಿ. ಆದರೆ ಉತ್ತಮ ನಾಗರೀಕರ ಆಯುಧಗಳನ್ನು ವಶಪಡಿಸಿಕೊಳ್ಳದಿರಲು ಕಾಯ್ದೆಯಲ್ಲಿ ಸಣ್ಣದೊಂದು ತಿದ್ದುಪಡಿ ತರುವ ಅಗತ್ಯವಿದೆ ಎಂದು ಸಿ.ಟಿ. ರವಿ ಅವರು ತಿಳಿಸಿದರು.
ಕಾಫಿಗೆ ಹೆಚ್ಚು ಚಿಕೋರಿಯನ್ನು ಬೆರೆಸಿ, ಮಾರಾಟ ಮಾಡುವುದನ್ನು ಆಹಾರ ಕಲಬೆರಿಕೆ ಕಾಯ್ದೆಯಡಿ ಜಾರಿಗೆ ತರಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಅವರು ತಿಳಿಸಿದರು.
ಹೋಟೆಲ್‌ಗಳಲ್ಲಿ ಕಾಫಿ ಮತ್ತು ಚಿಕೋರಿಯನ್ನು ಪ್ರತ್ಯೇಕವಾಗಿ ಇಡುವ ಪದ್ಧತಿ ಆರಂಭವಾಗಬೇಕು. ಅಗತ್ಯಬಿದ್ದವರು ಕಾಫಿಗೆ ಚಿಕೋರಿಯನ್ನು ಬೆರಸಿಕೊಳ್ಳಬೇಕು. ಕಾಫಿಗೆ ಶೇ. ೩೦ ರಷ್ಟು ಚಿಕೋರಿಯನ್ನು ಬೆರಸಲಾಗುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಶೇ. ೯೦ರಷ್ಟಕ್ಕೆ ಏರಿಕೆಯಾಗಿದೆ ಎಂದು ಸಚಿವ ಸಿ.ಟಿ. ರವಿ ಅವರು ವಿಷಾದ ವ್ಯಕ್ತಪಡಿಸಿದರು.
ಕಾಫಿ ಉದ್ಯಮಕ್ಕೆ ೨೫ ಲಕ್ಷ ರೂ. ಸಾಲಕ್ಕೆ ಶೇ. ೬ ರಷ್ಟು ಬಡ್ಡಿ ವಿಧಿಸಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದ ಕೈಯಲ್ಲಿಯಿಲ್ಲ. ಕೇಂದ್ರ ಸರ್ಕಾರ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ಅಧ್ಯಕ್ಷ ಎಂ. ಗಣಪತಿ ಪ್ರಾಸ್ತವಿಕ ಭಾಷಣ ಮಾಡಿದರು. ಉಪಾಧ್ಯಕ್ಷ ಶಿರಸ್ ವಿಜಯೇಂದ್ರ ಅವರು ಹೊಂದಿಸಿದರು.

Leave a Comment