ವಿಮಾನ ಹಾರಾಟ ಶುರು ಕಲ್ಯಾಣ ಕರ್ನಾಟಕ ಜನತೆಯ ನಾಲ್ಕು ದಶಕಗಳ ಕನಸು ನನಸು

ಕಲಬುರಗಿ,ನ.22-ನೀಲಿ ಬಾನಲಿ ತೇಲಿ ಬರುತ್ತಿದ್ದ ಲೋಹದ ಹಕ್ಕಿಯ ಬರಮಾಡಿಕೊಳ್ಳಲು ಜನ ಜಾತ್ರೆಯೇ ಸೇರಿತ್ತು. ಬಾನಂಗಳದಿಂದ ಧರೆಗಿಳಿದ ಲೋಹದ ಹಕ್ಕಿಯ ಕಂಡು ಎಲ್ಲೆಡೆ ಹರ್ಷೋದ್ಘಾರ ಅನುರಣಸಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಮಾನದಿಂದ ಕೆಳಗಿಳಿಯುತ್ತಿದ್ದಂತೆಯೇ ಹರ್ಷೋಲ್ಲಾಸ ಕಂಡುಬಂತು. ನಾಲ್ಕು ದಶಕಗಳ ಕನಸು ಸಾಗಾರಗೊಂಡ ಖುಷಿ ಎಲ್ಲರ ಕಣ್ಣಲ್ಲಿ ಕಾಣುತ್ತಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿಂದು ಕಂಡುಬಂದ ದೃಶ್ಯಾವಳಿ ಇದು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಮತ್ತಿತರ ಗಣ್ಯರು ಸರಿಯಾಗಿ 1.30ಕ್ಕೆ ಸ್ಟಾರ್ ಏರ್ ಸಂಸ್ಥೆಯ ವಿಮಾನದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಸಂಸದ ಡಾ.ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ, ಪ್ರಾದೇಶಿಕ ಆಯುಕ್ತ ಸುಬೋಧ ಯಾಧವ, ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೇರಿದಂತೆ ಮತ್ತಿತರ ಗಣ್ಯರು ಮುಖ್ಯಮಂತ್ರಿ ಹಾಗೂ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು.

ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೀಪ ಬೆಳಗಿಸುವುದರ ಮೂಲಕ ಕಲಬುರಗಿ ವಿಮಾನ ನಿಲ್ದಾಣವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.

 ನಾಲ್ಕು ದಶಕಗಳ ಕನಸು ಸಾಕಾರ

ಕಲಬುರಗಿಯಿಂದ ವಿಮಾನ ಹಾರಾಟ ಬರೋಬ್ಬರಿ ನಾಲ್ಕು ದಶಕಗಳ ಕನಸು. 742.23 ಎಕರೆ ಭೂಮಿಯಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟನೆ ಮಾಡುವುದರ ಮೂಲಕ ಈ ಭಾಗದ ಜನತೆಯ ಬಹುದಿನಗಳು ನನಸುಗೊಳಿಸಿದರು.

ನಗರದಿಂದ 15 ಕಿ.ಮೀ.ದೂರದಲ್ಲಿರುವ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 2008 ಜೂನ್ 14 ರಂದು ಅಡಿಗಲ್ಲು ಹಾಕಿದ್ದರು. ಇಂದು ಅವರೇ ವಿಮಾನ ನಿಲ್ದಾಣವನ್ನು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಿದರು.

 ಟಿಕೆಟ್ ಕಾಯ್ದಿರಿಸಿದ ಗಣ್ಯರು

ಸಂಜಯ್ ಘೋಡಾವತ್ ಸಮೂಹದ ಸ್ಟಾರ್ ಏರ್ ಸಂಸ್ಥೆ ಕಲಬುರಗಿ-ಬೆಂಗಳೂರು ಮಧ್ಯೆ ವಿಮಾನದ ಟಿಕೆಟ್ ಬುಕ್ಕಿಂಗ್ ಆರಂಭಿಸುತ್ತಿದ್ದಂತೆಯೇ ಸಂಸದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಹೈದ್ರಾಬಾದ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ.

ವಿಮಾನದ ಟಿಕೆಟ್ ಮೂಲ ಬೆಲೆ ರೂ.2,800 ಇದೆ.

 ಖರ್ಗೆ-ತಂಗಾ ಕೊಡುಗೆ ಅಪಾರ

ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಂ‌ಡು ಇಂದು ಉದ್ಘಾಟನೆಯಾಗಿರುವುದರ ಹಿಂದೆ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಹಾಗೂ ಕೊಡುಗೆಯೂ ಆಪಾರವಾಗಿದೆ. ವಿಮಾನ ನಿಲ್ದಾಣದ ರನ್ನವೇ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಳ್ಳುವಲ್ಲಿ ಖರ್ಗೆ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಕಳೆದ ವರ್ಷದ ಆಗಸ್ಟ್ 26 ರಂದು ವಿಮಾನ ನಿಲ್ದಾಣದಲ್ಲಿ ನಡೆದ ಪ್ರಾಯೋಗಿಕ ವಿಮಾನ ಹಾರಾಟಕ್ಕೂ ಖರ್ಗೆ ಕಾರಣರಾಗಿದ್ದರು. ಆ ಮೂಲಕ ಕಲಬುರಗಿ ಜನತೆಯ ಕನಸು ಸಾಕಾರಗೊಳಿಸಲು ಅವರು ಪ್ರಮಾಣಿಕ ಪ್ರಯತ್ನ ಮಾಡಿದ್ದರು.

ಕಲಬುರಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈ ಮೊದಲು ನಗರದ ಹೈಕೋರ್ಟ್ ಬಳಿ ಜಾಗ ಗುರುತಿಸಲಾಗಿತ್ತು. ಆಗ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಅನಂತಕುಮಾರ ಅವರು ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೋಯಿಂಗ್ ನಂತಹ ದೊಡ್ಡ ವಿಮಾನ ಇಳಿಯಲು ಈ ಸ್ಥಳ ಸಾಕಾಗದು ಬೇರೆಕಡೆ ಜಾಗ ಗುರುತಿಸುವಂತೆ ಸಲಹೆ ನೀಡಿದ್ದರು. ಎಸ್.ಎಂ.ಕೃಷ್ಣಾ ಸರ್ಕಾರದಲ್ಲಿ ಮೂಲಭೂತ ಸೌಕರ್ಯ ಸಚಿವರಾಗಿದ್ದ ಖರ್ಗೆ ಅವರು ಮತ್ತು ಆಗ ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಎಂ.ಆರ್.ತಂಗಾ ಅವರು ನಗರದ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿ ಸ್ಥಳ ಗುರುತಿಸಿದರು. ಅಷ್ಟೇ ಅಲ್ಲದೆ ಡಾ.ತಂಗಾ ಅವರು ವಿಮಾನ ನಿಲ್ದಾಣ ನಿರ್ಮಾಣಕ್ಕೆ  ತಮ್ಮ ಸ್ವಂತ ಜಮೀನು ನೀಡಿದ್ದಲ್ಲದೆ, ಸುತ್ತಮುತ್ತಲ್ಲಿನ ರೈತರ ಮನ ಒಲಿಸಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

 ರಾಜ್ಯದ ಎರಡನೇ ಅತಿ ಉದ್ದದ ರನ್ನವೇ

ಕಲಬುರಗಿ ವಿಮಾನ ನಿಲ್ದಾಣ 3.25 ಕಿ.ಮೀ.(3725 ಮೀಟರ್) ರನ್ನವೇ ಹೊಂದಿದ್ದು, ರಾಜ್ಯದ ಎರಡನೇ ಅತಿ ಉದ್ದದ ರನ್ನವೇ ಎಂಬ ಹೆಗ್ಗಳಿಕೆ ಪಡೆದಿದೆ. ಕರ್ನಾಟಕ ಸರ್ಕಾರ 175.57 ಕೋಟಿ ರೂ.ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು, ಒಟ್ಟು 742.23 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವಿದೆ.

 ವರ್ಷದ ಹಿಂದೆ ಪರೀಕ್ಷಾರ್ಥ ಹಾರಾಟ

26 ಆಗಸ್ಟ್ 2018 ರಂದು ಲಘು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನಡೆಸಲಾಗಿತ್ತು. ಮೊದಲ ವಿಮಾನ ರನ್ನವೇ ನಲ್ಲಿ ಹೈದ್ರಾಬಾದ್ ನ ಏಷ್ಯಾ ಫೆಸಿಫಿಕ್ ಫ್ಲೈಟ್ ಟ್ರೈನಿಂಗ್ ಸಂಸ್ಥೆಯ ಡೈಮಂಡ್ ಡಿಎ-40 ಮತ್ತು ಡೈಮಂಡ್ ಡಿಎ-42 ನಾಲ್ಕು ಆಸನಗಳ ಪುಟ್ಟ ವಿಮಾನ ಭೂಸ್ಪರ್ಶ ಮಾಡಿದ್ದವು.

ತದನಂತರ ಆಗ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ವಿಮಾನದಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಉದ್ಘಾಟಿಸಿದ್ದರು. ಆದಾದ ನಂತರ ಆಗ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ವಿಮಾನ ನಿಲ್ದಾಣದಿಂದ ಮುಂಬೈಗೆ ವಿಶೇಷ ವಿಮಾನದಲ್ಲಿ ತೆರಳಿದ್ದರು..

 ಕಲಬುರಗಿ ವಿಮಾನ‌ ನಿಲ್ದಾಣ‌ ಸಾಗಿ ಬಂದ ದಾರಿ

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ 1980 ರಿಂದಲೆ‌ ಕೂಗು ಆರಂಭ

ಪ್ರಾದೇಶಿಕ ಸಂಪರ್ಕ ಉತ್ತಮಗೊಳಿಸಲು ರಾಜ್ಯ ಸರ್ಕಾರವು ನವೆಂಬರ್ 15, 2007ರಲ್ಲಿ ಕಲಬುರಗಿಯಲ್ಲಿ ವಿಮಾನ‌ ನಿಲ್ದಾಣ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ.

ಜೂನ್ 14, 2008 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪರಿಂದ ಅಡಿಗಲ್ಲು.

ಅಗಸ್ಟ್ 26, 2018 ರಂದು ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿ.

ಆಗಸ್ಟ್ 2019ರ ಅಂತ್ಯದಲ್ಲಿ ಮೂರು ಪ್ಯಾಕೇಜ್ ಗಳಡಿ ಕೈಗೊಂಡ ಎಲ್ಲಾ ಕಾಮಗಾರಿಗಳು ಪೂರ್ಣ.

ವಿಮಾನ ನಿಲ್ದಾಣ ಅಬಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಕರ್ನಾಟಕ ಸರ್ಕಾರ ಮತ್ತು ಎ.ಎ.ಐ ನೊಂದಿಗೆ ಆಗಸ್ಟ್ 24, 2019 ರಂದು ಒಪ್ಪಂದ.

ಸೆಪ್ಟೆಂಬರ್ 13, 2019 ರಂದು 742 ಎಕರೆ ಪ್ರದೇಶವನ್ನು ಎ.ಎ.ಐ ನಿರ್ದೇಶಕ ಜ್ಣಾನೇಶ್ವರ ರಾವ್ ಅವರಿಗೆ ಡಿ.ಸಿ. ಶರತ್ಯ್ ಬಿ.ಭೂಮಿ ಹಸ್ತಾಂತರ.

ಅಕ್ಟೋಬರ್ 30, 2019 ರಂದು ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಸಂಚಾರ ನಡೆಸಲು ಎ.ಎ.ಐ ಗೆ ಏರೀಡ್ರೋಮ್‌ ಪರವಾನಿಗೆ.

ಐಎಟಿಎ ನಿಂದ ಸಾರ್ವಜನಿಕ ವಿಮಾನಯಾನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನವೆಂಬರ್ 22 ರಂದು ಕಲಬುರ್ಗಿ ವಿಮಾನ ನಿಲ್ದಾಣ ಲೋಕಾರ್ಪಣೆ..

 

Leave a Comment