ವಿಮಾನ ನಿಲ್ದಾಣ ಉದ್ಘಾಟನೆ: ಖರ್ಗೆ ಆಹ್ವಾನಿಸದೇ ಇರುವುದಕ್ಕೆ ಖಂಡನೆ

ಕಲಬುರಗಿ,ನ.22-ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದೇ ಇರುವ ಬಿಜೆಪಿ ಸರಕಾರದ ನೀತಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಖರ್ಗೆ ಅವರು ಈ ಹಿಂದೆ ಯುಪಿಎ ಸರಕಾರದ ಮೇಲೆ ಒತ್ತಡ ತಂದು ವಿಮಾನ ನಿಲ್ದಾಣದ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ವಿಮಾನ ಹಾರಾಟ ಪ್ರಾರಂಭ ಮಾಡಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅಡಿಗಲ್ಲು ಹಾಕಿದ ಮೇಲೆ ಗುತ್ತಿಗೆ ಪಡೆದ ಕಂಪನಿಗಳಿಂದ ತಕರಾರು/ಆಕ್ಷೇಪಗಳುಂಟಾಗಿ ಈ ಇಡೀ ಯೋಜನೆ ಸ್ಥಗೀತಗೊಂಡಿತು. ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿರುವ ಸಮಯದಲ್ಲಿ ಈ ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭದ ಕುರಿತು ಕೇಂದ್ರದಿಂದ ಅನುದಾನ ನೀಡಲೂ ಒತ್ತಡ ತಂದರೂ ಕೂಡಾ ಕೇಂದ್ರ ಬಿಜೆಪಿ ಸರಕಾರ ಇತ್ತಕಡೆ ಕಿಂಚಿತ್ತು ನೋಡದೇ ಕಣ್ಣುಮುಚ್ಚಿ ಕುಳಿತುಕೊಂಡಿತು.
ಇಂತಹ ಪರಿಸ್ಥಿತಿಯಲ್ಲಿ ಖರ್ಗೆಯವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿರುವ ಸಂದರ್ಭದಲ್ಲಿ ಸ್ಥಳೀಯ ಮಂಡಳಿಯ ಅನುದಾನ ಲಭಿಸುವಂತೆ ಮಾಡಿ ರಾಜ್ಯ ಸರಕಾರದಿಂದ ಅನುದಾನವನ್ನು ಪಡೆದು ಆಗ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ: ಶರಣಪ್ರಕಾಶ ಆರ್. ಪಾಟೀಲ ಹಾಗೂ ಪ್ರಿಯಾಂಕ ಎಂ. ಖರ್ಗೆ ಅವರಿಂದ ಹೆಚ್ಚಿನ ಅನುದಾನವನ್ನು ಮಂಜೂರಿ ಮಾಡಿಸಿ ವಿಮಾನ ನಿಲ್ದಾಣ ಕಾಮಗಾರಿ ಬೇಗ ಮುಗಿದು ಜನರು ಪ್ರಯಾಣಿಸುವದಕ್ಕೆ ಅನುಕೂಲ ಮಾಡಿಕೊಟ್ಟರು. ಅದರಂತೆ ಈ ಹಿಂದೆಯೇ ವಿಮಾನ ಹಾರಾಟ ಪ್ರಾರಂಭವಾಗಬೇಕಿತ್ತು. ಆದರೆ ಕೇಂದ್ರದ ಬಿಜೆಪಿ ಸರಕಾರ ಉದ್ಘಾಟನೆಯನ್ನು ಮುಂದೂಡುತ್ತಾ ಈಗ ದಿನಾಂಕ ನಿಗದಿಪಡಿಸಿದ್ದು, ವಿಮಾನ ನಿಲ್ದಾಣ ತಯ್ಯಾರಿಗೆ ಸೂತ್ರದಾರಿಯಾದ ಖರ್ಗೆಯವರನ್ನು ಉದ್ಘಾಟನೆಗೆ ವಿಶೇಷ ಆಹ್ವಾನಿತರನ್ನಾಗಿ ಆಮಂತ್ರಣ ಪತ್ರದಲ್ಲಿ ಮುದ್ರಿಸಿ ಉದ್ಘಾಟನೆಗೆ ಆಗಮಿಸಲು ಆಹ್ವಾನ ನೀಡದೇ ಕೀಳು ರಾಜಕೀಯ ಮಾಡಿದೆ ಎಂದು ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಯುಪಿಎ-2 ಸರಕಾರದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಮಾರ್ಗವಾಗಿ ಅನೇಕ ಹೊಸ ರೈಲುಗಳನ್ನು ಓಡಿಸಲು ಪ್ರಾರಂಭಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟು, ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಮಾಡಲು ಎಲ್ಲಾ ತಯ್ಯಾರಿ ಮಾಡಿದ್ದರು. ಮುಂದೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಈ ಕಡೆ ಕಿಂಚಿತ್ತು ಗಮನಹರಿಸದೇ ಯಾವುದೇ ಅನುದಾನ ನೀಡದೇ ಇದನ್ನು ಅಲಕ್ಷಿಸಿ ರಾಜಕೀಯ ದುರುದ್ದೇಶದಿಂದ ಪುನ: ಹೊಸ ಸಮಿತಿ ರಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಖರ್ಗೆ ಮಾಡಿದ ಅನೇಕ ಅಭಿವೃದ್ದಿ ಕೆಲಸಗಳಿಗೆ ಬಿಜೆಪಿ ಯವರು ತಮ್ಮ ಹೆಸರುಗಳನ್ನು ಹೆಳಿಕೊಳ್ಳುತ್ತಾ ಸುಳ್ಳು ಸಾರಾಂಶ ಸಾರುತ್ತಿದ್ದಾರೆ. ಇವರಿಗೆ ಕಲಬುರಗಿ ಮೇಲೆ ಕಾಳಜಿ ಇದ್ದರೆ ರೈಲ್ವೆ ವಿಭಾಗೀಯ ಕೇಂದ್ರ ಕಚೇರಿ ಸ್ಥಾಪನೆ ವಿಚಾರವಾಗಿ ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಲಬುರಗಿ ಸಂಸದ ಡಾ: ಉಮೇಶ ಜಾಧವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ದಿನಾಂಕ ಯಾವಾಗ ಎಂಬುದು ತಿಳಿಸಬೇಕೆಂದು ಆಗ್ರಹಿಸಿದ್ದಾರೆ..

Leave a Comment