ವಿಮಾನ ದರ ಹೆಚ್ಚಳ: ಡಿವಿಎಸ್ ತರಾಟೆ

ಬೆಂಗಳೂರು,ಆ.೧೭- ಕೇರಳ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಮಾನವೀಯತೆ ತೋರಿ ಜನರಿಗೆ ನೆರವಾಗದೆ, ವ್ಯಾಪಾರದ ದೃಷ್ಟಿಯಿಂದ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ವಿಮಾನ ಸಂಸ್ಥೆಗಳ ವಿರುದ್ಧ ಕೇಂದ್ರ ಸಚಿವ ಡಿ. ವಿ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನ ಸಂಸ್ಥೆಗಳು ಪ್ರಯಾಣ ದರವನ್ನು ಕಡಿಮೆ ಮಾಡಿ ಜನರಿಗೆ ಅನುಕೂಲ ಒದಗಿಸುವ ಬದಲು ಲಾಬಿಯಲ್ಲಿ ತೊಡಗಿವೆ ಎಂದು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಮಂಗಳೂರು ನಡುವೆ ವಿಮಾನ ಪ್ರಯಾಣ ದರ ೪ ಸಾವಿರಕ್ಕೂ ಕಡಿಮೆ ಇದೆ. ಆದರೆ ಪ್ರವಾಹದ ಬಳಿಕ ಖಾಸಗಿ ವಿಮಾನಗಳು ದರವನ್ನು ೧೮ ಸಾವಿರಕ್ಕೇರಿಸಿ ಸುಲಿಗೆ ಮಾಡುತ್ತಿವೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಶೀಘ್ರವೇ ಹೆಚ್ಚುವರಿ ವಿಮಾನ ವ್ಯವಸ್ಥೆ ಮಾಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರನ್ನು ಸದಾನಂದಗೌಡರು ಒತ್ತಾಯಿಸಿದ್ದಾರೆ. ಮಂಗಳೂರು ಮತ್ತು ಕೇರಳವನ್ನು ಸಂಪರ್ಕಿಸುವ ಎಲ್ಲಾ ಮಾರ್ಗಗಳು ಕಡಿತಗೊಂಡಿವೆ. ರೈಲುಗಳು ಕೂಡ ಸಂಚರಿಸುತ್ತಿಲ್ಲ ಹೀಗಿರುವಾಗ ವಿಮಾನ ಅಥವಾ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವುದು ಸೂಕ್ತವಾದದ್ದು, ಹಾಗೆಯೇ ಮಂಗಳೂರು-ಬೆಂಗಳೂರು, ಮಂಗಳೂರು-ಮುಂಬೈಗೆ ವಿಮಾನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದೂ ಸಲಹೆ ನೀಡಿದ್ದಾರೆ.

ಬೆಂಗಳೂರಿನಿಂದ ತಿರುವನಂತಪುರಂ ಮಾರ್ಗದ ವಿಮಾನ ದರ ಕೂಡ ಶೀಘ್ರ ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೇ, ಕೊಚ್ಚಿನ್ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಕಾರ್ಯಾಚರಣೆ ಆಗಸ್ಟ್ ೨೬ರ ಮಧ್ಯಾಹ್ನ ೨ ಗಂಟೆಯವರೆಗೆ ಸ್ಥಗಿತಗೊಳಿಸಿರುವುದರಿಂದ ಆ ಮಾರ್ಗದಲ್ಲಿ ಕೂಡ ದರ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರು, ತಿರುವನಂತಪುರಂ ಹಾಗೂ ಮಂಗಳೂರು ವಿಮಾನ ದರಗಳು ೧೫ರಿಂದ ೩೫ ಸಾವಿರ ರೂಪಾಯಿಗಳವರೆಗೆ ಏರಿಕೆ ಮಾಡಿದ್ದು, ಸಿವಿಲ್ ಏವಿಯೇಷನ್‌ನ ಡೈರೆಕ್ಟರ್ ಜನರಲ್ ಈ ಮಾರ್ಗದಲ್ಲಿ ವಿಮಾನ ದರವನ್ನು ಏರಿಸದಂತೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

Leave a Comment