ವಿಪಕ್ಷನಾಯಕರಾಗಿ ಸಿದ್ದರಾಮಯ್ಯ ಆಯ್ಕೆ:ಘೋಷಣೆ ಬಾಕಿ

 

ನವದೆಹಲಿ.ಅ.೯- ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತೇ ನಡೆದಿದ್ದು, ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಿದ್ದರಾಮಯ್ಯ ಅವರಿಗೆ ವಿಪಕ್ಷನಾಯಕನ ಹೊಣೆ ನೀಡಲು ಪಕ್ಷ ನಿರ್ಧರಿಸಿದ್ದು, ಈ ಬಗ್ಗೆ ಫೈನಲ್ ನಿರ್ಧಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಕೈ ಸೇರಿದೆ. ಇಂದು ರಾತ್ರಿಯೊಳಗೆ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ. ವಿಪಕ್ಷನಾಯಕನ ಸ್ಥಾನಕ್ಕಾಗಿ ಕಾಂಗ್ರೆಸ್ ನ ರಾಜ್ಯ ನಾಯಕರಲ್ಲಿ ಪೈಪೋಟಿ ಪ್ರಬಲವಾಗಿತ್ತು. ಕೆಲವರು ಹೈಕಮಾಂಡ್ ಮೊರೆ ಹೋಗಿ ಒತ್ತಡವನ್ನೂ ಹಾಕಿದ್ದರು. ಆದರೆ, ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆ ಹಾಗೂ ಮಧ್ಯಂತರ ಚುನಾವಣೆ ಎದುರಾಗುವ ಸಂಭವವಿರುವ ಕಾರಣ ಪಕ್ಷ ಎಲ್ಲ ಸಾಧ್ಯತೆಗಳನ್ನು ಅಳೆದುತೂಗಿ ಸಿದ್ದರಾಮಯ್ಯ ಅವರನ್ನು ವಿಪಕ್ಷನಾಯಕರನ್ನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಇನ್ನು ಕಳೆದ ಕೆಲ ದಿನಗಳ ಹಿಂದೆ ವಿಪಕ್ಷ ನಾಯಕನ ಆಯ್ಕೆ ಹಿನ್ನೆಲೆ ಅಭಿಪ್ರಾಯ ಸಂಗ್ರಹಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ಆಗಮಿಸಿದ್ದ ವೇಳೆ, ಅವರು ವೈಯಕ್ತಿಕವಾಗಿ ರಾಜ್ಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದರು. ಈ ವೇಳೆಯೂ ಸಿದ್ದರಾಮಯ್ಯ ಅವರ ಹೆಸರನ್ನೇ ಬಹುತೇಕರು ಸೂಚಿಸಿದ್ದರು. ಇದರೊಂದಿಗೆ ಎಚ್.ಕೆ.ಪಾಟೀಲ್ ಅವರ ಹೆಸರು ಕೂಡ ವಿಪಕ್ಷ ಮಾಯಕನ ಸ್ಥಾನಕ್ಕೆ ಕೇಳಿಬಂದಿತ್ತು. ಕೆಲ ಮೂಲ ಕಾಂಗ್ರೆಸ್ಸಿಗರಿಂದಲೂ ಸಿದ್ದರಾಮಯ್ಯ ಅವರಿಗೆ ವಿರೋಧ ವ್ಯಕ್ತವಾಗಿತ್ತು.

ಆದರೆ, ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಲು ನಿರ್ಧರಿಸಿದೆ. ಈ ಕುರಿತ ಅಧಿಕೃತ ಹೇಳಿಕೆಯಷ್ಟೇ ಬಾಕಿ ಉಳಿದಿದೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕನಾಗಿ ಹಾಗೂ ಸಿ.ಎಲ್.ಪಿ ನಾಯಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ…

Leave a Comment