ವಿನಯ ಮನೆ ಮಗನಾಗಿ ಕೆಲಸ ಮಾಡುತ್ತಾನೆ-ಹೊರಟ್ಟಿ

ಕುಂದಗೋಳ,ಏ16-ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಧಾರವಾಡ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದಿಂದ ಸ್ಪರ್ಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕಡು ಬಿಸಿಲಿನಲ್ಲೂ  ಭರ್ಜರಿ ಪ್ರಚಾರ ಕಾರ್ಯ ನಡೆಸಿದರು. ಈ ವೇಳೆ ಅವರಿಗೆ ನಾಲ್ಕೂ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಭಾರೀ ಜನಬೆಂಬಲ ವ್ಯಕ್ತವಾಯಿತು.
ಮೊದಲಿಗೆ ಕುಂದಗೋಳ ತಾಲೂಕಿನ ಯಲಿವಾಳ ಹಾಗೂ ಯಲಿವಾಳ ಜಿಪಂ ವ್ಯಾಪ್ತಿಯಲ್ಲಿ ತೆರೆದ ವಾಹನದಲ್ಲಿ ಬಸವರಾಜ ಹೊರಟ್ಟಿ ಹಾಗೂ ಮಾಜಿ ಸಚಿವ ದಿವಂಗತ ಸಿ ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ
ಅವರ ಜೊತೆಗೆ ರೋಡ್ ಶೋ ನಡೆಸಿದ ವಿನಯ ಕುಲಕರ್ಣಿ ಅವರು ಕಾಂಗ್ರೆಸ್ ಗೆ ಮತ ನೀಡುವಂತೆ ಮತದಾರರಲ್ಲಿ ವಿನಂತಿ ಮಾಡಿಕೊಂಡರು.
ನಂತರ ಕಮಡೊಳ್ಳಿಗೆ ತೆರಳಿದ ಅವರು ಗ್ರಾಮದ ಮನೆ ಮನೆಗೆ ತೆರಳಿ ಮತಯಾಚಿಸಿದರಲ್ಲದೇ ಕಮಡೊಳ್ಳಿ ಜಿಪಂ ವ್ಯಾಪ್ತಿಯ ಪ್ರಮುಖ ಸಮಸ್ಯೆ ಗಳ ಬಗ್ಗೆ ಹಿರಿಯರು ಹಾಗೂ ಯುವಕರಿಂದ ಮಾಹಿತಿ ಪಡೆದುಕೊಂಡು. ಅಲ್ಲಿಂದ ಸಂಶಿ ಗೆ ತೆರಳಿದ ಕಾಂಗ್ರೆಸ್ ನ ಸಾವಿರಾರು ಕಾರ್ಯಕರ್ತರು ಸಂಶಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ನಂತರ ಗುಡಗೇರಿಗೆ ತೆರಳಿದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಡೆ ಗ್ರಾಮದ ದ್ಯಾಮವ್ವ ದೇವಿ ದರ್ಶನ ಪಡೆದು ರೋಡ್ ಶೋ ಮೂಲಕ ಮತಯಾಚಿಸಿದರು.
ತಮ್ಮ ಪ್ರಚಾರ ಭಾಷಣದಲ್ಲಿ ಮಾತನಾಡಿದ ವಿನಯ ಕುಲಕರ್ಣಿ ಅವರು, ಚಿನ್ನದಂತ ಭೂಮಿ ಇದ್ದರೂ ಕುಂದಗೋಳ ತಾಲೂಕು ನೀರಿನ ಕೊರತೆಯಿಂದ ನಲುಗುತ್ತಿದೆ. ಈ ಭಾಗದ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸಿ, ನೀಡು ಕೊಡಿ ಎಂದು ಪ್ರಹ್ಲಾದ ಜೋಶಿ ಅವರನ್ನು ಸಂಸತ್ ಗೆ ಕಳಿಸಿದರೆ ಮೋದಿ ಹಾಗೂ ಗೋವಾಕ್ಕೆ ಹೆದರಿ ಕಳ್ಳ ಬೆಕ್ಕಿನ ರೀತಿ ಖಾಲಿ ಅಡ್ಡಾಡಿದರು ಎಂದು ಲೇವಡಿ ಮಾಡಿದರು.
ಕುಂದಗೋಳ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದೆ. ಆದರೆ, ಸಂಸದ ಜೋಶಿ ಮಾತ್ರ ಪ್ರತಿ ಐದು ವರ್ಷಕ್ಕೊಮ್ಮೆ ಮಾತ್ರ ಈ ಕಡೆಗೆ ಬರುತ್ತಾರೆ. ಇಂತಹ ಬೇಜವಾಬ್ದಾರಿ ಸಂಸದರಿದ್ದರೆ ಈ ಜನ್ಮದಲ್ಲಿ ಕುಂದಗೋಳ ಉದ್ದಾರ ಆಗೋಲ್ಲ‌. ಈ ಬಾರಿ ಜೋಶಿ ಅವರನ್ನು ಮನೆಗೆ ಕಳಿಸಲೇ ಬೇಕಾಗಿದೆ. ಮತದಾರರು ನನಗೆ ಅವಕಾಶ ಮಾಡಿಕೊಟ್ಟರೇ ನಾನು ಏನೇಂದು ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಹ್ಲಾದ ಜೋಶಿ ಅವರು ೧೫ ವರ್ಷ ಸಂಸದರಾಗಿ ಕುಂದಗೋಳ ತಾಲೂಕಿಗೆ ಏನು ಕೊಡುಗೆ ನೀಡದ್ದಾರೆ ಎಂದು ನೋಡಿದರೆ ಎಲ್ಲವೂ ಶೂನ್ಯ. ಕೇವಲ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ಬಿಟ್ಟು ನಮ್ಮ ಜನರಿಂದಲೇ ಆರಿಸಿ ಬಂದು ನಮ್ಮ ಜನರನ್ನೇ ತುಳಿಯುವ ಜೋಶಿ ಅವರಿಗೆ ಈ ಸಾರಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದರು‌
ರೈತನ ಮಗ, ಸ್ವತಃ ಮಾದರಿ ರೈತ ವಿನಯ ಕುಲಕರ್ಣಿ ಈ ಬಾರಿ ಸಂಸದರಾದರೇ ರೈತರ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗುತ್ತದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮನೆಯ ಮಗನಾಗಿ ವಿನಯ ಕುಲಕರ್ಣಿ ಕೆಲಸ ಮಾಡಲಿದ್ದಾರೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ದಿವಂಗತ ಸಿ ಎಸ್ ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಮಾತನಾಡಿ, ವಿನಯ ಕುಲಕರ್ಣಿ ಅವರಂತ ಕ್ರಿಯಾಶೀಲ ನಾಯಕರು ನಮ್ಮ ಭಾಗಕ್ಕೆ ಸಂಸದರಾಗಿ ಬರಬೇಕು. ಕಾಂಗ್ರೆಸ್ ನ್ನು ಈ ಸಾರಿ ನಮ್ಮ ಕುಂದಗೋಳ ಭಾಗದ ಜನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ. ಬರೀ ಭಾಷಣ ಮಾಡುವ ಬಿಜೆಪಿ ನಾಯಕರಿಗೆ ಬುದ್ದಿ ಕಲಿಸಬೇಕಿದೆ ಎಂದರು.
ನಾಲ್ಕು ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಪ್ರಚಾರದ ವೇಳೆ ನೂರಾರು ಯುವಕರು ಸ್ವಯಂಪ್ರೇರಿತವಾಗಿ ವಿನಯ ಕುಲಕರ್ಣಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದು ವಿಶೇಷವಾಗಿತ್ತು. ಈ ವೇಳೆ ರಾಜಣ್ಣ ಕೊರವಿ, ಕುಂದಗೋಳ ತಾಲೂಕಿನ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯರು, ಕುಂದಗೋಳ ಕಾಂಗ್ರೆಸ್, ಜೆಡಿಎಸ್ ಮುಖಂಡರು ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಇದ್ದರು.
ವಾಯುಪುತ್ರ ಜೋಶಿ!
ಗುಡಗೇರಿಯಲ್ಲಿ ಮಾತನಾಡಿದ ವಿನಯ ಕುಲಕರ್ಣಿ ಅವರು ಸಂಸದ ಪ್ರಹ್ಲಾದ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾವು ಮಹಾನ್ ಶಕ್ತಿಶಾಲಿಯಾದ ವಾಯುಪುತ್ರ ಆಂಜನೇಯನ ಬಗ್ಗೆ ಕೇಳಿದ್ದೇವೆ. ಆದರೆ, ಹುಬ್ಬಳ್ಳಿ- ಧಾರವಾಡದಲ್ಲಿ ಒಬ್ಬರು ವಾಯುಪುತ್ರರಿದ್ದಾರೆ. ಅವರಿಗೆ ಸ್ವಂತ ಶಕ್ತಿ ಸಾಮರ್ಥ್ಯವೇ ಇಲ್ಲ. ಬರೀ ಗಾಳಿಯಲ್ಲೇ ತೇಲಾಡುವ ವಾಯುಪುತ್ರ ಎಂದು ಪರೋಕ್ಷವಾಗಿ ಛಾಟಿ ಬೀಸಿದರು. ಈ ಸಾರಿ ಮೋದಿ ಅಲೆ ಏನೂ ನಡೆಯೋಲ್ಲ. ವಾಯುಪುತ್ರ ಈ ಸಾರಿ ಭೂಮಿಪುತ್ರ (ಕೆಳಗಿಳಿಯುತ್ತಾರೆ) ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.
….

Leave a Comment