ವಿನಯ್ ನನ್ನು ಬಹು ಮತದಿಂದ ಗೆಲ್ಲಿಸಿ – ಲಾಡ್

ಧಾರವಾಡ, ಏ.15-ನಗರದ 20ನೇ ವಾರ್ಡಿನ ಧಾನೇಶ್ವರಿ ನಗರ, ವೀರಭದ್ರೇಶ್ವರ ಕಾಲೋನಿಯಲ್ಲಿಂದು ಮಾಜಿ ಸಚಿವ ಸಂತೋಷ ಲಾಡ್  ಧಾರವಾಡ ಲೋಕಸಭಾ ಕ್ಷೇತ್ರದ  ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪರ ಭರ್ಜರಿ ಪ್ರಚಾರವನ್ನು ಕೈಗೊಂಡರು.
ಇದೇ ಸಂದರ್ಭದಲ್ಲಿ  ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು  ದೇಶ ಕಟ್ಟುವ ಕೆಲಸದಲ್ಲಿ ಯುವಕರು ಮುಂಚೂಣಿಯಲ್ಲಿ ನಿಂತು ಏಕತೆ ಮತ್ತು ಸಮಗ್ರತೆಗಾಗಿ ಜಾತ್ಯಾತೀತ ಮನೋಭಾವವನ್ನು ಹೊಂದಿದಂತಹ ಕಾಂಗ್ರೇಸ್ ಪಕ್ಷಕ್ಕೆ ಬಹುಮತ ನೀಡಬೇಕೆಂದು ಆಗ್ರಹಿಸಿದರು.
ದೇಶ ಕಟ್ಟುವಲ್ಲಿ  ಯುವಕರ ಪಾತ್ರ ಮಹತ್ವವಾಗಿದ್ದು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ  ರಾಹುಲ್ ಗಾಂಧಿಯವರ ಕೈ ಬಲಪಡಿಸಿ ಅವರನ್ನು ಪ್ರಧಾನಿಯಾಗಿ ಮಾಡುವ ನಿಟ್ಟಿನಲ್ಲಿ ತಾವುಗಳು ಶ್ರಮವಹಿಸಿ ಎಂದರು.  ಅಲ್ಲದೇ ಮೈತ್ರಿ ಪಕ್ಷ (ಕಾಂಗ್ರೆಸ್ – ಜೆಡಿಎಸ್) ದ ಅಭ್ಯರ್ಥಿಯಾದ  ವಿನಯ ಕುಲಕರ್ಣಿಯವರು ಮೂಲತಃ ವಿದ್ಯಾರ್ಥಿ ಜೀವನದಿಂದ ಹೋರಾಟವನ್ನು ಮಾಡುತ್ತಾ ಕೃಷಿಕರ ಬೆಂಬಲವಾಗಿ ನಿಂತು ಸಾಕಷ್ಟು ಹೋರಾಟ ಮತ್ತು ಜನಪರ ಕಾಯಕಗಳನ್ನು ಕೈಗೊಂಡಿದ್ದಾರೆ. ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆರಿಸಿ ತರಬೇಕೆಂದು ಸಂತೋಷ ಲಾಡ್‍ರವರು ಕರೆ ಕೊಟ್ಟರು.
ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ದಿನದಲಿತರ, ಬಡವರ, ಶೊಷಿತರನ್ನು ಮೇಲ್ಪಂಕ್ತಿಗೆ ತರಲು ಅಪಾರವಾಗಿ ಶ್ರಮಿಸಿದೆ. ಇದು ದೇಶದ ಜನರಿಗೆ ಗೊತ್ತಿದ್ದ ವಿಷಯ. ಹಿಂದುಳಿದವರ ಉದ್ಧಾರಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಪಾರವಾಗಿ ಶ್ರಮಿಸಿದೆ ಎಂದರು.
ರಾಜ್ಯದಲ್ಲಿಯೂ ಸಹ ಈ ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ಹಾಗೂ ಪ್ರಸ್ತುತ ಸಮ್ಮಿಶ್ರ ಸರ್ಕಾರ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಇದರಿಂದ ಸಕಲರಿಗೆ ಅನುಕೂಲಗಳಾಗಿವೆ ಎಂದ ಅವರು  ಕೇವಲ ಜಾತಿ ರಾಜಕಾರಣವನ್ನು  ಮಾಡುತ್ತ ಸಮಾಜದ ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಬಿಜೆಪಿಗೆ ಎಂದೂ ಬೆಂಬಲಿಸದಿರಿ ಎಂದು ಲಾಡ್ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಉಮಾ ಬಿದರಿಮಠ, ಕವಿತಾ ಕಟ್ಟಿ, ಮುಖಂಡರಾದ ವಸಂತ ಅರ್ಕಾಚಾರ್, ಕೆ.ಎಸ್.ಆರ್.ಟಿ.ಸಿ. ಮಾಜಿ ನಿರ್ದೇಶಕರಾದ ಆನಂದ ಕಲಾಲ, ದಾವಲಸಾಬ ನದಾಫ, ಜನಾಬ ಮುಲ್ಲಾನವರ, ಓಂಕಾರ ಬಿದರಿಮಠ, ಸುದೀಪ ಶೆಟ್ಟಿ, ಮಂಜುನಾಥ ಬಟಕುರಿ, ಸಾಯಿ ಡಾಂಗೆ, ಮುತ್ತು ಕೋಟೂರ ಮತ್ತಿತರು ಉಪಸ್ಥಿತರಿದ್ದು ಕಾಂಗ್ರೇಸ್ ಪಕ್ಷದ ಪ್ರಚಾರ ಕೈಗೊಂಡರು.

Leave a Comment