ವಿಧೇಯಕ ಸಿ.ಎಂಗೆ ಬಿಸಿ ತುಪ್ಪ

(ನಮ್ಮ ಪ್ರತಿನಿಧಿಯಿಂದ)
ಬೆಳಗಾವಿ, ನ. ೧೪- ವಿವಾದಕ್ಕೆ ಎಡೆಮಾಡಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಕುರಿತಂತೆ ಶಾಸಕರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿದ್ದಾರೆ. ಹೀಗಾಗಿ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.  ವಿಧೇಯಕ ಸಂಬಂಧ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಪರ-ವಿರೋಧ ನಿಲುವು ವ್ಯಕ್ತವಾಗಿರುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲದೆ ವಿಧೇಯಕ ಮಂಡನೆಗೆ ಅವಕಾಶ ಸಿಗದಿದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವ ರಮೇಶ್ ಕುಮಾರ್ ಹೇಳಿರುವುದು. ಸಿದ್ದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ, ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಇಂದು ಬೆಳಿಗ್ಗೆಯೇ ಸಿದ್ಧರಾಮಯ್ಯ ಅವರು ತಮ್ಮ ಆಪ್ತ ಹಾಗೂ ಕೆಲ ಹಿರಿಯ ಸಚಿವರ ಜತೆಗೆ ಅನೌಪಚಾರಿಕ ಚರ್ಚೆ ನಡೆಸಿದರು.  ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಇಂದು ಬೆಳಿಗ್ಗೆಯೇ ಕೆಲ ಹಿರಿಯ ಸಚಿವರುಗಳ ಜತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಕ್ಕಟ್ಟಿನ ಪರಿಹಾರ ಸೂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಈ ವಿಧೇಯಕಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಮುಖ್ಯಮಂತ್ರಿಗಳು ಮುಂದಾಗಿದ್ದು, ಶಾಸಕರು, ಸಚಿವರು ಎಲ್ಲರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡೇ ವಿಧೇಯಕವನ್ನು ಯಥಾಸ್ಥಿತಿ ಮಂಡಿಸಬೇಕೇ ಅಥವಾ ಬದಲಾವಣೆ ಮಾಡಬೇ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಈಗಾಗಲೇ ಪರ ವಿರೋಧ ಗುಂಪುಗಳು ಆಗಿದ್ದು, ಸಚಿವ ಸಂಪುಟದಲ್ಲೂ ಪರ ವಿರೋಧ ಗುಂಪುಗಳಾಗಿವೆ. ಕೆಲ ಸಚಿವರುಗಳು ಮಸೂದೆ ಪರವಾಗಿದ್ದರೆ, ಮತ್ತೆ ಕೆಲವರು ವೈದ್ಯರ ಬೇಡಿಕೆಯಂತೆ ಕೆಲ ನಿಯಮಗಳನ್ನು ಬದಲಾಯಿಸುವ ಪರ ನಿಂತಿದ್ದಾರೆ. ಇದು ಬಿಕ್ಕಟ್ಟಿಗೆ ಕಾರಣವಾಗಿದೆ.

ವಿಧೇಯಕದಲ್ಲಿ ವೈದ್ಯರಿಗೆ ಶಿಕ್ಷೆ ವಿಧಿಸುವ ಹಾಗೂ ದಂಡ ವಿಧಿಸುವ ನಿಯಮವನ್ನು ಕೈಬಿಡುವಂತೆ ಆಗ್ರಹಿಸಿ ಖಾಸಗಿ ವೈದ್ಯರು ಬೆಳಗಾವಿಯ ಸುವರ್ಣಸೌಧದ ಬಳಿ ಮುಷ್ಕರ ನಡೆಸಿದ್ದಾರೆ. ನಿನ್ನೆ ಈ ವೈದ್ಯರ ಜತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚರ್ಚೆ ನಡೆಸಿದ್ದರಾದರೂ ಅದು ಫಲಪ್ರದವಾಗಲಿಲ್ಲ. ವೈದ್ಯರು ಇಂದೂ ಸಹ ಮುಷ್ಕರ ಮುಂದುವರೆಸಿದ್ದಾರೆ.

ರಮೇಶ್‌ಕುಮಾರ್ ಪಟ್ಟು, ರಾಜೀನಾಮೆ ಬೆದರಿಕೆ
ಸರ್ಕಾರ ತಂದಿರುವ ಈ ವಿಧೇಯಕ ಜನಪರವಾಗಿದೆ. ಯಥಾಸ್ಥಿತಿಯಲ್ಲೇ ವಿಧೇಯಕ ಮಂಡನೆ ಆಗಬೇಕು. ಕೆಲ ಅಂಶಗಳನ್ನು ಕೈಬಿಟ್ಟರೆ ವಿಧೇಯಕ ಅರ್ಥ ಕಳೆದುಕೊಳ್ಳುತ್ತದೆ. ಹಾಗಾಗಿ ಯಾವುದೇ ಬದಲಾವಣೆ ಬೇಡ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಪಟ್ಟು ಹಿಡಿದಿರುವುದು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅಡ್ಡಿಯಾಗಿದೆ. ಜತೆಗೆ ವಿಧೇಯಕದಲ್ಲಿ ಬದಲಾವಣೆಯಾದರೆ ರಾಜೀನಾಮೆ ನೀಡುವುದಾಗಿ ರಮೇಶ್‌ಕುಮಾರ್ ತಮ್ಮ ಆಪ್ತವಲಯದಲ್ಲಿ ಹೇಳಿರುವುದು ಮುಖ್ಯಮಂತ್ರಿಗಳ ತಲೆ ನೋವನ್ನು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ನಾಳಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲದರ ಬಗ್ಗೆಯೂ ಚರ್ಚೆ ನಡೆಸಿ ರಮೇಶ್‌ಕುಮಾರ್ ಅವರ ಮನವೊಲಿಸಿದ ನಂತವರೇ ವಿಧೇಯಕದ ಬಗ್ಗೆ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಲಿದ್ದಾರೆ.

ರಮೇಶ್‌ಕುಮಾರ್ ಪ್ರತಿಕ್ರಿಯೆ ಇಲ್ಲ

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕಕ್ಕೆ ಸಂಬಂಧಿಸಿದಂತೆ ವೈದ್ಯರು ಮುಷ್ಕರ ಮುಂದುವರೆಸಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಆರೋಗ್ಯ ಸಚಿವ ರಮೇಶ್‌ಕುಮಾರ್ ನಿರಾಕರಿಸಿದರು. ಸುವರ್ಣ ವಿಧಾನಸೌಧ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ವಿಧೇಯಕದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದೆ ನೋ ರಿಯಾಕ್ಷನ್ ಎಂದು ಕೈ ಸನ್ನೆ ಮಾಡಿ ಒಳ ಹೋದರು.

ಶೆಟ್ಟರ್ ಹೇಳಿಕೆ

ವೈದ್ಯರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸರ್ಕಾರ ವೈದ್ಯರ ಪ್ರತಿಭಟನೆನಯ್ನು ಗಂಭೀರವಾಗಿ ತೆಗೆದುಕೊಂಡು ವೈದ್ಯರ ಜತೆ ಚರ್ಚಿಸಲಿ ಎಂದು ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ಒತ್ತಾಯಿಸಿದರು. ವೈದ್ಯರ ಮುಷ್ಕರದಿಂದ ರಾಜ್ಯದಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಇನ್ನಷ್ಟು ಅನಾಹುವತ ಆಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಮುಂದಿನ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಮಹದಾಯಿ ನದಿ ನೀರಿನ ವಿವಾದವನ್ನು ಬಗೆಹರಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಜನ ತಮ್ಮ ಮನೆ ಮುಂದೆ ಧರಣಿ ನಡೆಸುವುದು ಸರಿಯಲ್ಲ. ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ದಯಮಾಡಿ ಪ್ರತಿಭಟನೆ ವಾಪಸ್ ಪಡೆದುಕೊಳ್ಳಿ ಎಂದು ಅವರು ಹುಬ್ಬಳ್ಳಿಯ ತಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕರರಿಗೆ ಮನವಿ ಮಾಡಿದರು

Leave a Comment