ವಿಧೇಯಕ : ಜಂಟಿ ಸದನ ಸಮಿತಿ ವರದಿ ಮಂಡನೆ

ಬೆಳಗಾವಿ (ಸುವರ್ಣಸೌಧ), ನ. ೧೪- ಖಾಸಗಿ ಆಸ್ಪತ್ರಗಳ ತಿದ್ದುಪಡಿ ವಿಧೇಯಕದಲ್ಲಿ ವೈದ್ಯರಿಗೆ ಜೈಲುಶಿಕ್ಷೆ ವಿಧಿಸುವ ನಿಯಮಗಳಿಗೆ ಸಂಬಂಧಿಸಿದಂತೆ ಈ ವಿಧೇಯಕವನ್ನು ಪರಿಶೀಲಿಸಲು ರಚಿಸಲಾಗಿರುವ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಯಾವುದೇ ಶಿಫಾರಸ್ಸುಗಳನ್ನು ಮಾಡಿಲ್ಲ. ಜೈಲು ಶಿಕ್ಷಯನ್ನು ಉಳಿಸಿಕೊಳ್ಳಬೇಕೋ ಅಥವಾ ಕೈಬಿಡಬೇಕೋ ಎಂಬ ಬಗ್ಗೆ ಈ ವರಿದಿಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ.ಹಾಗಾಗಿ ಮೂಲ ಕಾಯ್ದೆಯಲ್ಲಿ ಜೈಲು ಶಿಕ್ಷೆಯ ಉಲ್ಲೇಖವಿದ್ದು, ಅಂತಿಮವಾಗಿ ವಿಧಾನಸಭೆಯಲ್ಲೇ ಈ ಕಾಯ್ದೆ ಬಗ್ಗೆ ಚರ್ಚೆ ನಡೆದು ಎಲ್ಲವೂ ತೀರ್ಮಾನವಾಗಲಿದೆ.

ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕವನ್ನು ಪರಿಶೀಲಿಸಲು ಶಾಸಕ ಕೆ.ಎನ್. ರಾಜಣ್ಣ ಅವರ ನೇತೃತ್ವಲ್ಲಿ ರಚಿಸಲಾಗಿದ್ದ ವಿಧಾನಮಂಡಲದ ಜಂಟಿ ಸಮಿತಿ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು.ಈ ವರದಿಯಲ್ಲಿ ವಿಧೇಯಕಕ್ಕೆ ಸಂಬಂಧಿಸಿದಂತೆ ಕೆಲ ಅಂಶಗಳನ್ನು ಅಳವಡಿಸಿಕೊಳ್ಳುವ ಸಂಬಂಧ ಸಮಿತಿ ಹಲವು ಶಿಫಾರಸ್ಸುಗಳನ್ನು ಮಾಡಿದೆ. ಆದರೆ ಜೈಲು ಶಿಕ್ಷೆಯನ್ನು ಉಳಿಸಿಕೊಳ್ಳಬೇಕೋ, ಬಿಡಬೇಕೋ ಎಂಬ ಬಗ್ಗೆ ಯಾವುದೇ ಶಿಫಾರಸ್ಸುಗಳು ಇಲ್ಲ.

ಮೂಲ ಕಾಯ್ದೆಯಲ್ಲಿ ಜೈಲು ಶಿಕ್ಷೆ ಪ್ರಸ್ತಾವವಿದೆ. ವಿಧಾನಮಂಡಲದಲ್ಲಿ ಈ ತಿದ್ದುಪಡಿ ವಿಧೇಯಕ ಮೂಲ ಕಾಯ್ದೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಚರ್ಚೆಗಳು ನಡೆದು ಅಂತಿಮವಾಗಿ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಬೇಕಾಗುತ್ತದೆ.  ಈ ತಿದ್ದುಪಡಿ ವಿಧೇಯಕವನ್ನಾಧರಿಸಿ ವೈದ್ಯರು ಮುಷ್ಕರ ನಡೆಸಿದ್ದಾರೆ. ಜೈಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರಕ್ಕೆ ದಿನಾಂಕ ನಿಗದಿಯಾಗಿಲ್ಲ. ನಾಳೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ  ಈ ವಿಧೇಯಕದ ಅಂಗೀಕಾರದ ಚರ್ಚೆಗೆ ದಿನಾಂಕ ನಿಗದಿಯಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.  ಶತಾಯ ಗತಾಯ ಈ ವಿಧೇಯಕವನ್ನು ಯಾಥಾವತ್ತಾಗಿ ಜಾರಿಗೊಳಿಸಲು ಆರೋಗ್ಯ ಸಚಿವ ರಮೇಶ್‌ಕುಮಾರ್ ಶತಪ್ರಯತ್ನ ನಡೆಸಿದ್ದಾರೆ.

Leave a Comment