ವಿಧಾನಸೌಧದಲ್ಲಿ ದೋಸ್ತಿ; ಪಾಲಿಕೆಯಲ್ಲಿ ಕುಸ್ತಿ

ಗೆಲ್ಲಿಸುವ ಹೊಣೆಗಾರಿಕೆ ಶಾಸಕರಿಗೆ ಎಂ.ಆರ್. ಸತ್ಯನಾರಾಯಣ

ಮೈಸೂರು, ಆ. 27. ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಉಳಿಸಿದ್ದು, ಪ್ರಚಾರ ರಂಗೇರಿದೆ. ಮತದಾರನ ಮನ ಗೆಲ್ಲಲು ಎಲ್ಲ ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಈ ಬಾರಿ ಅಧಿಕಾರ ಗದ್ದುಗೆ ಹಿಡಿಯಲು ಮೂರೂ ಪಕ್ಷಗಳು ಹರಸಾಹಸ ಮಾಡುತ್ತಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಆಯಾ ಪಕ್ಷಗಳ ಸ್ಥಳೀಯ ಶಾಸಕರಿಗೆ ವಹಿಸಲಾಗಿದೆ. ಇದು ಲೋಕಲ್ ಶಾಸಕರಿಗೆ ಅಗ್ನಿ ಪರೀಕ್ಷೆಯಾಗಿದ್ದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಾಸಕರು ನೇರ ಹೊಣೆಗಾರಿಕೆ ಹೊತ್ತಿರುವ ಕಾರಣ, ಸ್ಥಳೀಯ ಸಂಸ್ಥೆ ಚುನಾವಣೆಗೆ ಒಂದರ್ಥದಲ್ಲಿ ಅಸೆಂಬ್ಲಿ ಚುನಾವಣೆಯಷ್ಟೇ ರಂಗು ಪಡೆದಿದೆ.

ವೈರುಧ್ಯದ ನಡುವೆ ಹೋರಾಟ

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳು ಸಮಾನಾಂತರ ಹೋರಾಟ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಮಾಡಿಕೊಂಡು ಸರ್ಕಾರ ರಚಿಸಿರುವುದು ಈಗ ಇತಿಹಾಸ. ಇಂತಹ ಸನ್ನಿವೇಶದಲ್ಲಿ ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು, ಅದೇ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಥಳೀಯವಾಗಿ ಟೀಕೆ, ಟಿಪ್ಪಣಿ ಮಾಡುವುದು ಉಭಯ ಮೈತ್ರಿ ಪಕ್ಷಗಳ ಮುಖಂಡರಿಗೆ, ವಿಶೇಷವಾಗಿ ಸ್ಥಳೀಯ ಶಾಸಕರಿಗೆ ಇರಿಸು ಮುರಿಸು ತಂದಿದೆ. ಈ ಹಿನ್ನೆಲೆಯಲ್ಲಿ ಟೀಕೆ, ಟಿಪ್ಪಣಿ ಮಾಡದೆ, ಕೇವಲ ಸ್ಥಳೀಯ ಅಜೆಂಡಾ ಮೇಲೆ ಮತಬೇಟೆಗೆ ಮೃತ್ರಿ ಪಕ್ಷಗಳ ಅಭ್ಯರ್ಥಿಗಳು ಮುಂದಾಗಿದ್ದಾರೆ.

ಶಾಸಕರಿಗೆ ಪ್ರತಿಷ್ಠೆಯ ಪ್ರಶ್ನೆ

ಪಾಲಿಕೆ ಚುನಾವಣೆ ಮೈಸೂರು ಮಹಾನಗರ ವ್ಯಾಪ್ತಿಯ ನಾಲ್ಕೂ ವಿಧಾಸಭಾ ಕ್ಷೇತ್ರಗಳ ಶಾಸಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20 ವಾರ್ಡುಗಳನ್ನು ಗೆಲ್ಲಲು ಟಾರ್ಗೆಟ್ – 20 ಎಂಬ ಘೋಷವಾಕ್ಯದೊಂದಿಗೆ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ. ರಾಮದಾಸ್ ಸಕ್ರಿಯರಾಗಿದ್ದಾರೆ. ಚಾಮರಾಜ ಕ್ಷೇತ್ರ ವ್ಯಾಪ್ತಿಯ 19 ವಾರ್ಡುಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸ್ಥಳೀಯ ಶಾಸಕ ಎಲ್. ನಾಗೇಂದ್ರ ಕಾರ್ಯತಂತ್ರ ರೂಪಿಸಿದ್ದಾರೆ.

ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯ ವಾರ್ಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಾಸಕ ತನ್ವೀರ್ ಸೇಠ್ ಮಸೀದಿ ರಾಜಕಾರಣಕ್ಕೆ ಮೊರೆಹೋಗಿದ್ದಾರೆ. ಉಳಿದಂತೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬೆರಳೆಣಿಕೆಯಷ್ಟು ವಾರ್ಡುಗಳು ಸೇರುತ್ತವಾದರೂ, ಜಿ.ಟಿ. ದೇವೇಗೌಡ ಈಗ ಜಿಲ್ಲಾ ಉಸ್ತುವಾರಿ ಮಂತ್ರಿ. ಹೀಗಾಗಿ ನಾಲ್ಕೂ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಈ ಬಾರಿ ಸ್ವತಂತ್ರವಾಗಿ ಅಧಿಕಾರ ಗದ್ದುಗೆ ಏರುವ ಹೊಣೆಗಾರಿಗೆ ಎದುರಾಗಿದೆ.

ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಸಹ ಮೈಸೂರು ಜಿಲ್ಲೆಯವರೇ. ನೂತನ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರ ಜೊತೆಗೂಡಿ ಭರ್ಜರಿ ಗೆಲುವು ದಾಖಲಿಸಲು ಸಚಿವ ಜಿ.ಟಿ. ದೇವೇಗೌಡ ತಮ್ಮದೇ ಶೈಲಿಯ ಕಾರ್ಯತಂತ್ರ ರೂಪಿಸಿದ್ದಾರೆ.

Leave a Comment