ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು

ಬೆಂಗಳೂರು, ಜು. ೧೧- ವಿಧಾನಸೌಧದಲ್ಲಿ ನಿನ್ನೆ ಶಾಸಕ ಸುಧಾಕರ್ ರಾಜೀನಾಮೆ ನೀಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರ ಬೆಂಬಲಿಗರ ನಡುವೆ ಉಂಟಾದ ನೂಕುನುಗ್ಗಲು ಹಾಗೂ ಕೋಲಾಹಲದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವಿಧಾನಸೌಧದ ಸುತ್ತಮುತ್ತ ಎರಡು ಕಿ.ಮೀಟರ್ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಿ, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ವಿಧಾನಸೌಧದ ಒಳಗೆ, ಆವರಣ ಸೇರಿದಂತೆ, ಎರಡು ಕಿ.ಮೀಟರ್ ವ್ಯಾಪ್ತಿಯಲ್ಲಿ 5 ಕ್ಕಿಂತ ಹೆಚ್ಚುಮಂದಿ ಗುಂಪು ಸೇರುವುದಾಗಲಿ ಮಾಡುವಂತಿಲ್ಲ. ಪ್ರತಿಭಟನೆ ನಡೆಸುವುದು, ಧರಣಿ ಕೂರುವುದಕ್ಕೂ ಅವಕಾಶವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ವಿಧಾನಸೌಧದ ಒಳಪ್ರವೇಶಿಸುವವರನ್ನು ಪ್ರತಿಯೊಬ್ಬರನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದ್ದು, ಸಚಿವಾಲಯದ ನೌಕರರನ್ನು ಬಿಟ್ಟು ಸಾರ್ವಜನಿಕರಿಗೆ ಪ್ರವೇಶಾವಕಾಶವನ್ನು ನಿರ್ಬಂಧಿಸಲಾಗಿದೆ.
ವಿಧಾನಸೌಧದ ನಾಲ್ಕು ಗೇಟ್‌ಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿದೆ. ವಿಧಾನಸೌಧದ ಒಳಗೆ ಜೆಡಿಎಸ್ – ಕಾಂಗ್ರೆಸ್, ಬಿಜೆಪಿ ಸೇರಿದಂತೆ, ಯಾವುದೇ ಪಕ್ಷದ ಕಾರ್ಯಕರ್ತರನ್ನಾಗಲಿ, ಮುಖಂಡರಾಗಲಿ ಒಳಪ್ರವೇಶಿಸದಂತೆ ನಿಗಾವಹಿಸಲಾಗಿದೆ.

Leave a Comment