ವಿಧಾನಸಭೆ ವಿಸರ್ಜನೆ : ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಹೈದರಾಬಾದ್, ಸೆ. ೨- ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿ ಅವಧಿಗೆ ಮುನ್ನವೇ ಚುನಾವಣೆಗೆ ಹೋಗಲು ಮುಂದಾಗಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ಮತದಾರರ ಪಟ್ಟಿಯನ್ನು ಪರಿಷ್ಕರಿಸದೆ, ಚುನಾವಣೆಗೆ ಹೋಗುವ ನಿರ್ಧಾರವನ್ನು ಟಿಆರ್‌ಎಸ್ ನೇತೃತ್ವದ ಸರ್ಕಾರ ಪ್ರಕಟಿಸಿದರೆ, ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಕಾಂಗ್ರೆಸ್ ಕೂಡ ತಯಾರಿ ನಡೆಸಿದೆ.

  •  ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ.
  •  ಅವಧಿಗೂ ಮುನ್ನ ಚುನಾವಣೆ.
  •  ಸಂಜೆ ಸಚಿವ ಸಂಪುಟದಲ್ಲಿ ನಿರ್ಧಾರ ಸಾಧ್ಯತೆ.
  •  ಸರ್ಕಾರದ ಸಾಧನೆ ಬಿಂಬಿಸುವ ಬೃಹತ್ ಕಾರ್ಯಕ್ರಮ.
  •  ಬಿಜೆಪಿ ಜತೆ ಮೈತ್ರಿಗೆ ಇಂಗಿತ.

ಮುಂದಿನ ವರ್ಷ ಮೇ ತಿಂಗಳವರೆಗೆ ಸರ್ಕಾರದ ಅವಧಿಯಿದ್ದು, ಅವಧಿಗೂ ಮುನ್ನ ತೆಲಂಗಾಣ ವಿಧಾನಸಭೆಗೆ ಚುನಾವಣೆಯನ್ನು ನಡೆಸುವ ಇಂಗಿತ ಹೊಂದಿದ್ದಾರೆ. ನವೆಂಬರ್, ಡಿಸೆಂಬರ್ ವೇಳೆಗೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಡ, ಮಿಜೋರಾಂ ರಾಜ್ಯಗಳಿಗೆ ಚುನಾವಣೆ ನಡೆಯಲಿದ್ದು, ಆ ಸಮಯದಲ್ಲೇ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರದ ಸಾಧನೆಯನ್ನು ಬಿಂಬಿಸುವ ಬೃಹತ್ ಱ್ಯಾಲಿಯನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಇಂದು ಮಧ್ಯಾಹ್ನ ಹಮ್ಮಿಕೊಂಡಿದ್ದು, ಇದುವರೆಗೂ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಿರುವ ವಿವಿಧ ಸಾಧನೆಗಳನ್ನು ಜನರ ಎದುರು ಬಿಚ್ಚಿಡಲು ಮುಂದಾಗಿದ್ದಾರೆ.
ಅದಾದ ಬಳಿಕ ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ವಿಷಯ ಎಲ್ಲೆಡೆ ಹರಿದಾಡುತ್ತಿದ್ದು, ತೆಲಂಗಾಣದ ವಿವಿಧ ರಾಜಕೀಯ ಪಕ್ಷಗಳ ಚಿತ್ತ ಸಂಜೆಯ ಸಚಿವ ಸಂಪುಟ ಸಭೆಯತ್ತ ನೆಟ್ಟಿದೆ.

ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿ ಬಿಜೆಪಿ ಜೊತೆ ಕೈ ಜೋಡಿಸಿ ವಿಧಾನಸಭೆಯ ಚುನಾವಣೆ ಎದುರಿಸಲು ಕೆ. ಚಂದ್ರಶೇಖರ್ ರಾವ್ ಮುಂದಾಗಿದ್ದು, ಈ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯದ 119 ವಿಧಾನಸಭೆ ಕ್ಷೇತ್ರಗಳ ಪೈಕಿ ಕನಿಷ್ಟ ನೂರು ಸ್ಥಾನಗಳನ್ನು ಗೆಲ್ಲುವ ಕಡೆ ಕೆ. ಚಂದ್ರಶೇಖರ್ ರಾವ್ ಮುಂದಾಗಿದ್ದಾರೆ. ಹೀಗಾಗಿ ಆಯಕಟ್ಟಿನ ಸ್ಥಳಗಳಿಗೆ ತಮ್ಮ ನೆಚ್ಚಿನ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸದಲ್ಲಿ ಕಳೆದ 2 – 3 ದಿನಗಳಿಂದ ನಿರತರಾಗಿದ್ದಾರೆ.

ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎನ್ನುವುದಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.

ಬೃಹತ್ ಸಭೆ

ಹೈದರಾಬಾದ್ ಹೊರವಲಯದ ಕೊಂಗಾರ ಕಾಲನ್ ಬಳಿ ಪ್ರಗತಿ ನಿವೇದನಾ ಸಭಾ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಈ ಸಭೆಯಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮುಂದಾಗಿದ್ದಾರೆ.

ಸಭೆಯ ಹಿನ್ನೆಲೆಯಲ್ಲಿ 20 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ವಿವಿಧೆಡೆಗಳಿಂದ ಪಕ್ಷದ ಕಾರ್ಯಕರ್ತರು ಹಾಗೂ ಫಲಾನುಭವಿಗಳನ್ನು ಕರೆತರಲು 7,300 ಬಸ್‌ಗಳನ್ನು ನಿಯೋಜಿಸಲಾಗಿದೆ. ಭದ್ರತೆಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸರಿಸುಮಾರು 25 ಲಕ್ಷ ಜನರು ಭಾಗವಹಿಸುವ ಸಾಧ್ಯತೆಗಳಿವೆ.

ನ್ಯಾಯಾಲಯದ ಮೊರೆ

ಮತದಾರರ ಅಂತಿಮ ಪಟ್ಟಿಯನ್ನು ಪರಿಷ್ಕರಿಸದೆ ಚುನಾವಣೆಗೆ ಹೋಗುವ ನಿರ್ಧಾರ ಕೈಗೊಂಡರೆ, ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎನ್. ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಸರ್ಕಾರ ಜನರ ನಿರೀಕ್ಷಣೆಗಳಿಗೆ ತಕ್ಕಂತೆ ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದಾರೆ.

Leave a Comment