ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕಾಂಗ್ರೆಸ್, ಜೆಡಿಎಸ್ ಶಾಸಕರ ಅನುದಾನ ಕಡಿತ ವಿವಾದ

ಬೆಂಗಳೂರು, ಫೆ 20 – ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಕಡಿತಗೊಳಿಸಿ, ಕಾಮಗಾರಿಗಳನ್ನು ತಡೆಹಿಡಿದಿರುವ ವಿಚಾರ ವಿಧಾನಸಭೆಯಲ್ಲಿಂದು ಗದ್ದಲಕ್ಕೆ ಕಾರಣವಾಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು ಕಡಿತಗೊಳಿಸಲಾಗಿದೆ.  ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಹಲವು ಶಾಸಕರು ಸದನದಲ್ಲಿ ಗದ್ದಲವೆಬ್ಬಿಸಿದರು. ಹಗರಿಬೊಮ್ಮನಹಳ್ಳಿ ಶಾಸಕ  ಭೀಮನಾಯಕ, ಐತಿಹಾಸಿಕ ಕೊಟ್ಟೂರು ಜಾತ್ರೆಗೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರಿಂದ ಸಾವಿರಾರು ಜನರ ಮುಂದೆ ನಾನು ತಲೆತಗ್ಗಿಸುವಂತಾಯಿತು ಎಂದು ಆರೋಪಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಪಕ್ಷ ಸದಸ್ಯರ ಅನುದಾನ ಕಡಿತಗೊಳಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಾವು ಜನರ ಅಭಿವೃದ್ಧಿಗಾಗಿ ಅನುದಾನ ಕೇಳುತ್ತಿದ್ದೇವೆ ಎಂದರು. ಕುಣಿಗಲ್ ಶಾಸಕ ರಂಗನಾಥ್ ಅವರು ತಮ್ಮ ಕ್ಷೇತ್ರಕ್ಕೆ ನೀಡಿದ್ದ 700 ಕೋಟಿ  ರೂ. ಅನುದಾನ ಕಡಿತಗೊಳಿಸಲಾಗಿದೆ ಎಂದು ಕಿಡಿಕಾರಿದರು. ಶಾಸಕ ಪ್ರಿಯಾಂಕ್ ಖರ್ಗೆ ಕೂಡ ತಮ್ಮ ಕ್ಷೇತ್ರಕ್ಕೆ 37 ಕೋಟಿ ರೂ. ಅನುದಾನ ಕಡಿತಗೊಳಿಸಿರುವುದಾಗಿ ಆರೋಪಿಸಿದರು. ಶೃಂಗೇರಿ ಶಾಸಕ ರಾಜೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ನಡೆ ವಿರುದ್ಧ ಕಿಡಿಕಾರಿದರು.

ಆಗ ಸಿದ್ದರಾಮಯ್ಯ, ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. ಈ ನಡುವೆ ಬಿಜೆಪಿಯ ಸಿ.ಸಿ.ಪಾಟೀಲ್ ಎದ್ದುನಿಂತು, ಕಳೆದ ಆರು ವರ್ಷಗಳಲ್ಲಿ ನಾವು ಅನುಭವಿಸಿದ್ದ ಕಷ್ಟಗಳು ಈಗ ನಿಮಗೆ ಅರಿವಾಗುತ್ತಿದೆಯೇ ಎಂದು ಕಾಂಗ್ರೆಸ್ ಶಾಸಕರನ್ನು ಮಾತಿನಿಂದ ತಿವಿದರು.

ಈ ಗದ್ದಲದ ನಡುವೆ ಎದ್ದು ನಿಂತ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ತಮ್ಮ ಇಲಾಖೆಗೆ ಸಂಬಂಧಿಸಿದ ಸ್ಪಷ್ಟೀಕರಣ ನೀಡಲು ಮುಂದಾದರು. ಅದನ್ನೊಪ್ಪದ ಶಾಸಕರು, ಕೇವಲ ಒಂದು ಇಲಾಖೆಗೆ ಸಂಬಂಧಿಸಿದಲ್ಲ, ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಆಗ ಸ್ಪೀಕರ್ ಮಧ್ಯಪ್ರವೇಶಿ ಅವರನ್ನು ಸಮಾಧಾನಗೊಳಿಸಿದರು. ನಂತರ ಮಾತು ಆರಂಭಿಸಿದ ಕಾರಜೋಳ, ಸರ್ಕಾರಗಳು ಕನಿಷ್ಠ ಆರ್ಥಿಕ ಶಿಸ್ತು ಹೊಂದಿರಬೇಕು. ಮಂಜೂರಾದ ಮೊತ್ತಕ್ಕಿಂತ ಆರೇಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದರೆ, ಅವುಗಳನ್ನು ತಡೆಹಿಡಿಯುವುದು ಅನಿವಾರ್ಯವಾಗುತ್ತದೆ ಎಂದರು.

ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ 4,179 ಕೋಟಿ ರೂ. ಮಂಜೂರಾಗಿದ್ದರೆ, ಒಟ್ಟು 8,482 ಕೋಟಿ ರೂ.ಗಳಿಗೆ ಅಂದರೆ ಆರು ಪಟ್ಟು ಹೆಚ್ಚುವರಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕಟ್ಟಡ ಕಾಮಗಾರಿಗಳಿಗೆ  ಲಭ್ಯವಿರುವ ಅನುದಾನಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಯೋಜನೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ಮಂಡಳಿಗೆ ಮಂಜೂರಾಗಿದ್ದ 414 ಕೋಟಿ ರೂ.ಗಳಾದರೆ, ಅನುಮೋದನೆ ದೊರೆತ ಕಾಮಗಾರಿಗಳ ವೆಚ್ಚ 3490 ಕೋಟಿ ರೂ. ಇಂತಹ ಪರಿಸ್ಥಿತಿಯಲ್ಲಿ ಕಾಮಗಾರಿಯನ್ನು ಮುಂದುವರಿಸಲು ಅವಕಾಶ ನೀಡಲು ಹೇಗೆ ಸಾಧ್ಯ? ತಡೆ ಹಿಡಿಯುವುದು ಅನಿವಾರ್ಯವಾಗಿತ್ತು ಎಂದರು.

ಆಗ ಸ್ಪೀಕರ್, ಈ ಕಾಮಗಾರಿಗಳಿಗೆ ಹಣಕಾಸು ಇಲಾಖೆಯ ಅನುಮೋದನೆ ದೊರೆತಿರಲಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಕಾರಜೋಳ, ಇಲ್ಲ, ಹಲವು ಯೋಜನೆಗಳು ಅನುಮೋದನೆ ಪಡೆಯದೆಯೇ ಆರಂಭಗೊಂಡಿವೆ. ಆದ್ದರಿಂದ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ರಸ್ತೆ ಅನುದಾನದಡಿ ಲಭ್ಯವಿರುವ ಮೊತ್ತದ ವ್ಯಾಪ್ತಿಯನ್ನೂ ಮೀರಿ 5700 ರೂ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಇದರಿಂದ ಗುತ್ತಿಗೆದಾರರು ವಿಷ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಹಣಕಾಸು ಇಲಾಖೆಯ ಅನುಮೋದನೆ ಪಡೆಯದೆ ಟೆಂಡರ್ ಪ್ರಕ್ರಿಯೆ ನಡೆಸಲು ಹೇಗೆ ಸಾಧ್ಯ? ರಾಜ್ಯ ಸರ್ಕಾರ ತಮ್ಮ ಶಾಸಕರಿಗೆ ನೀಡಲು ವಿಪಕ್ಷಗಳ ಅನುದಾನವನ್ನು ಕಡಿತಗೊಳಿಸಿದೆ. ಈಗ ಇಲ್ಲಸಲ್ಲದ ನೆವ ಹೇಳುತ್ತಿದೆ ಎಂದು ಆರೋಪಿಸಿದರು.

ಈ ವಾದವನ್ನು ಪುಷ್ಠೀಕರಿಸಿದ ಸಿದ್ದರಾಮಯ್ಯ, ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳೆ 500 ಕೋಟಿ ರೂ. ವೆಚ್ಚ ಮಾಡಲು ಹಣವೆಲ್ಲಿತ್ತು. ಇದ್ಯಾವ ರೀತಿಯ ಆರ್ಥಿಕ ಶಿಸ್ತು ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಶಾಸಕ ಸುನೀಲ್ ಕುಮಾರ್, ಬಾದಾಮಿ ಕ್ಷೇತ್ರಕ್ಕೂ 600 ಕೋಟಿ ರೂ. ಅನುದಾನ ನೀಡಲಾಗಿದೆಯಲ್ಲಾ ಎಂದು ಹೇಳಿಕೆ ನೀಡಿದರು. ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ, ಹೌದು ನೀಡಿದ್ದಾರೆ. ಏನೀಗ. ನಾನು ಕೂಡ ಓರ್ವ ಶಾಸಕನೇ. ಅದು ನನ್ನ ಹಕ್ಕು . ಬೇಕಿದ್ದರೆ ಅದನ್ನು ಹಿಂಪಡೆದುಕೊಳ್ಳಿ ಎಂದು ಏರುದನಿಯಲ್ಲಿ ಸವಾಲು ಹಾಕಿದರು.

ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೈತ್ರಿ ಸರ್ಕಾರದ ಅವಧಿಯಲ್ಲಿ 105 ಸದಸ್ಯರಿರುವ ಬಿಜೆಪಿ 2986 ಕೋಟಿ ರೂ., 79 ಸದಸ್ಯರಿಗೆ ಕಾಂಗ್ರೆಸ್ ಗೆ 3834 ಕೋಟಿ ರೂ. ಹಾಗೂ 37 ಶಾಸಕರಿರುವ ಕಾಂಗ್ರೆಸ್ 2974 ಅನುದಾನ ನೀಡಲಾಗಿತ್ತು. ಇದು ಹಿಂದಿನ ಸರ್ಕಾರ ನೀಡಿರುವ ಅನುದಾನದಲ್ಲಿದ್ದ ತಾರತಮ್ಯ ಎಂಬ ವಿವರವನ್ನು ಸದನದ ಮುಂದಿಟ್ಟರು.

ಈ ನಡುವೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಹೊರಗಡೆ 100 ಜನರ ಪರವಾಗಿದ್ದು, ಆಂತರಿಕವಾಗಿ ಕೇವಲ ಮೂರ್ನಾಲ್ಕು ಜನರ ಪರವಾಗಿರುವ ಸರ್ಕಾರದಿಂದ ಇಂತಹ ಅನಾಹುತಗಳು ನಡೆಯುತ್ತವೆ. ಇದು ಕೇವಲ ಈಗಿನ ಆಡಳಿತ ಪಕ್ಷಕ್ಕೆ ಸಂಬಂಧಿಸಿದಲ್ಲ. ಹಿಂದಿನ ಆಡಳಿತ ಪಕ್ಷದಲ್ಲೂ ಇದೇ ಪರಿಸ್ಥಿತಿಯಿತ್ತು. ಸಂವಿಧಾನದ ಮೂಲ ರಚನೆಯೇ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ತಾವು ಸ್ಪೀಕರ್ ಆಗಿದ್ದಾಗ, ತಮ್ಮ ಕ್ಷೇತ್ರಕ್ಕೆ ನ್ಯಾಯವಾಗಿ ಸಿಗಬೇಕಾದುದನ್ನು ಪಡೆದುಕೊಳ್ಳಲಾಗಲಿಲ್ಲ. ಸದನದ ಅತ್ಯುನ್ನತ ಹುದ್ದೆಯಲ್ಲಿ ಕುಳಿತು ನನ್ನ ಕ್ಷೇತ್ರಕ್ಕೆ ಬೇಕಾದ ಸಣ್ಣ ಅನುಕೂಲತೆ ಪಡೆಯಲು ಬೇಡಬೇಕಾದ ಪರಿಸ್ಥಿತಿ ಇತ್ತು ಎಂದ ಅವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನುದ್ದೇಶಿಸಿ, ನಿಮಗೆ ನನ್ನ ಪರಿಸ್ಥಿತಿ ಬಾರದಿರಲಿ ಎಂದರು.

ಸದನದಲ್ಲಿ ಕೆಲವು ಬಾಯಿಲ್ಲದ ಶಾಸಕರಿರುತ್ತಾರೆ. ಅವರಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಅಂತಹರಿಗೆ ಸರ್ಕಾರ ನ್ಯಾಯ ಒದಗಿಸಬೇಕು. ಸಿದ್ದರಾಮಯ್ಯ, ಯಡಿಯೂರಪ್ಪನಂತಹ ನಾಯಕರು ಕೇವಲ ಪಕ್ಷಗಳಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿಗಳ ಬಳಿಗೆ ಹೋಗಲು ಅವಕಾಶ ಪಡೆದು ಮನವೊಲಿಸುವವರಿಗೆ ಮಾತ್ರ ಲಾಭ ಎಂಬ ಧೋರಣೆ ಬದಲಾಗಬೇಕು ಎಂದು ಸಲಹೆ ನೀಡಿದರು.

ಇಷ್ಟಾದರೂ, ಶಾಸಕರ ಗದ್ದಲ ನಿಲ್ಲದಾಗ, ಸ್ಪೀಕರ್ ಕಾಗೇರಿ, ನಿಮ್ಮ ಸದಸ್ಯರಿಗೆ ತಿಳಿ ಹೇಳಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ಸಿದ್ದರಾಮಯ್ಯ ಕೂಡ ತಮ್ಮ ಸದಸ್ಯರ ಆಕ್ರೋಶವನ್ನು ತಣ್ಣಗಾಗಿಸಲು ಹರಸಾಹಸ ಪಡಬೇಕಾಯಿತು. ನಂತರ ಸಿದ್ದರಾಮಯ್ಯ, ನಾನು ಕೂಡ  ಹಣಕಾಸು ಸಚಿವನಾಗಿದ್ದಾಗ ಹಲವು ಬಜೆಟ್ಗಳನ್ನು ಮಂಡಿಸಿದ್ದೇನೆ. ಹಣಕಾಸು ಇಲಾಖೆಯ ಅನುಮತಿಯಿಲ್ಲದೆ ಟೆಂಡರ್ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದ ವಿಷಯ. ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳು, ಕೊನೆಯ ಹಂತದಲ್ಲಿರುವ ಯೋಜನೆಗಳಿಗೆ ತಡೆಹಿಡಿದಿರುವ ಅನುದಾನ ಬಿಡುಗಡೆಗೊಳಿಸ. ಇಲ್ಲದಿದ್ದರೆ ಶಾಸಕರು ತಮ್ಮ ಜನರ ಮುಂದೆ ಮುಜುಗರಗೊಳಗಾಗುತ್ತಾರೆ. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆಯದ ಯೋಜನೆಗಳನ್ನು ಕೈಬಿಡಿ ಎಂದು ಮನವಿ ಮಾಡಿದರು.

ಅದಕ್ಕುತ್ತರಿಸಿದ ಕಾರಜೋಳ, ಹಣಕಾಸು ಇಲಾಖೆಯ ಅನುಮೋದನೆ ಪಡೆಯದ ಯೋಜನೆಗಳಿಗೆ ಮಾತ್ರ ತೊಂದರೆಯಾಗಿದೆಯಷ್ಟೇ ಎಂದು ಸಮರ್ಥನೆ ನೀಡಿ ಚರ್ಚೆಗೆ ಅಂತ್ಯ ಹಾಡಿದರು.

Leave a Comment