ವಿದ್ರೋಹಿ ಹುಚ್ಚಾಟ ಪಾಕ್ ಪರ ಘೋಷಣೆ :ಅಮೂಲ್ಯ ಬಳಿಕ ಅರುದ್ರಾ ಅವಾಂತರ, ಪೊಲೀಸರಿಂದ ಬಂಧನ

ಬೆಂಗಳೂರು, ಫೆ ೨೧- ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ದೇಶ ದ್ರೋಹದ ಆರೋಪದಲ್ಲಿ ನಿನ್ನೆಯಷ್ಟೇ ಬಂಧನವಾಗಿರುವ ವಿದ್ಯಾರ್ಥಿನಿ ಅಮೂಲ್ಯ ಪ್ರಕರಣ ಹಚ್ಚ ಹಸಿರಾಗಿರುವಾಗಲೇ ಪಾಕಿಸ್ತಾನದ ಪರವಾಗಿ ಭಿತ್ತಿಪತ್ರ ಪ್ರದರ್ಶಿಸಿದ ಮತ್ತೊಬ್ಬ ಯುವತಿ ಅರುದ್ರಾಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದಲ್ಲಿ ನಡೆದಿದೆ.

  • ಮತ್ತೊಬ್ಬ ಯುವತಿಯಿಂದ ಪಾಕಿಸ್ತಾನ ಪರ ಘೋಷಣೆ
  • ಅಮೂಲ್ಯ ಬಳಿಕ ವಿದ್ಯಾ ಸರದಿ
  • ಅಮೂಲ್ಯ ಬಂಧನಕ್ಕೆ ಯುವತಿ ಆಕ್ರೋಶ
  • ಟೌನ್ ಹಾಲ್ ಮುಂಭಾಗ ಏಕಾಏಕಿ ಪಾಕ್ ಪರ ಘೋಷಣೆ
  • ಯುವತಿ ಮೇಲೆ ಹಲ್ಲೆಗೆ ಪ್ರತಿಭಟನಾಕಾರರ ಯತ್ನ
  • ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
  • ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಭೇಟಿ

ದೇಶದ್ರೋಹದ ಆರೋಪ ಎದುರಿಸುತ್ತಿರುವ ಅಮೂಲ್ಯ ವಿರುದ್ಧವಾಗಿ ಕನ್ನಡಪರ ಸಂಘಟನೆಗಳು, ಶ್ರೀರಾಮ ಸೇನೆ ಮತ್ತು ಹಿಂದೂ ಜನ ಜಾಗೃತಿ ಸಮಿತಿ ಸೇರಿ ವಿವಿಧ ಸಂಘಟನೆಗಳು ನಗರದ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾಶ್ಮೀರ ಮುಕ್ತಗೊಳಿಸುವ ಭಿತ್ತಿ ಪತ್ರ ಹಿಡಿದು ಏಕಾಏಕಿ ಪಾಕಿಸ್ತಾನದ ಪರವಾಗಿ ಫೋಷಣೆ ಕೂಗಿದರು.

ಪ್ರತಿಭಟನೆ ಸ್ಥಳದಲ್ಲಿ ಯುವತಿ, ಫ್ರೀ ಕಾಶ್ಮೀರ, ಮುಸ್ಲಿಂ ಮುಕ್ತಿ, ದಲಿತ ಮುಕ್ತಿ, ಫಲಕ ಹಿಡಿದು ಘೋಷಣೆ ಕೂಗಿದ್ದರಿಂದ ಪ್ರತಿಭಟನಾಕಾರರನ್ನು ಕೆಲ ಕಾಲ ಚಕಿತಗೊಳಿಸದರು. ಸ್ಥಳದಲ್ಲೇ ಇದ್ದ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಗೆ ಕೊಂಡೊಯ್ದು ವಿಚಾರಣೆ ನಡೆಸಿದ್ದಾರೆ.

ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನ ಹಾಗೂ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಯುವತಿಯನ್ನು ಎಸ್.ಜೆ.ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಆಕೆ ಅಪ್ರಾಪ್ತ ವಯಸ್ಸಿನವಳು ಎಂದು ಹೇಳಲಾಗಿದೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ ಮತ್ತೋರ್ವ ಯುವತಿ ವಿದ್ಯಾ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಜೊತೆಗೆ ಅಮೂಲ್ಯ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ಯುವತಿಯ ಮೇಲೆ ಗಂಭೀರ ಪ್ರಕರಣ ದಾಖಲಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಹರೀಶ್ ಒತ್ತಾಯಿಸಿದ್ದಾರೆ.

ಪೊಲೀಸ್ ಠಾಣೆಗೆ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ ಮುಖರ್ಜಿ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಿನ್ನೆ ಸಂಜೆ ಫ್ರೀಡಂ ಪಾರ್ಕ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶ ದ್ರೋಹದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಅವರನ್ನು ಪೊಲೀಸರು ತಡ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

’ದೂರು ದಾಖಲು’
ಪುರಭವನ ಮುಂಭಾಗ ಹಿಂದೂ ಪರ ಸಂಘಟನೆಗಳು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಪರಿಚಿತ ಯುವತಿ, ಸ್ಥಳಕ್ಕೆ ಆಗಮಿಸಿ ಘೋಷಣೆ ಕೂಗಿದ್ದಾರೆ ಆಕೆ ಯಾರು, ಎಲ್ಲಿಯವರು, ವಿಳಾಸ ಇನ್ನೂ ಗೊತ್ತಾಗಿಲ್ಲ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.
– ಚೇತನ್ ಸಿಂಗ್ ರಾಥೋಡ್,
ಡಿಸಿಪಿ, ಕೇಂದ್ರ ವಿಭಾಗ

 

Leave a Comment