ವಿದ್ಯುತ್ ಸ್ಪರ್ಶಿಸಿ ಯುವಕ ಮೃತ್ಯು

ಪುತ್ತೂರು, ಅ.೧೧- ಒಬ್ಬಂಟಿಯಾಗಿ ವಾಸ್ತವ್ಯವಿದ್ದ ಅವಿವಾಹಿತ ಯುವಕನೊಬ್ಬ ಮನೆಯ ವಿದ್ಯುತ್ ಸಂಪರ್ಕದ ಸರ್ವಿಸ್ ವಯರಿನ ಮೂಲಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ.
ಕೆದಿಲ ಗ್ರಾಮದ ಕುಕ್ಕಾಜೆ ನಿವಾಸಿ ರಾಮ ಬಂಗೇರ ಅವರ ಪುತ್ರ ದಯಾನಂದ (೩೦) ಮೃತಪಟ್ಟ ಯುವಕ. ಟೈಲ್ಸ್, ಮಾರ್ಬಲ್, ಗ್ರಾನೈಟ್ ಅಳವಡಿಸುವ ಗಾರೆ ಕಾರ್ಮಿಕರಾಗಿದ್ದ ದಯಾನಂದ ಅವರು ಕೆದಿಲ ಗ್ರಾಮದ ಕುಕ್ಕಾಜೆಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಅವರ ಮೃತದೇಹ ನಿನ್ನೆ ಮನೆಯ ಅಂಗಳ ಬದಿಯಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ದಯಾನಂದ ಅವರು ಮಂಗಳವಾರ ರಾತ್ರಿ ವೇಳೆ ಮನೆಗೆ ವಿದ್ಯುತ್ ಸರಬರಾಜು ಆಗದ ಕಾರಣ ವಿದ್ಯುತ್ ಸಂಪರ್ಕದ ಸರ್ವಿಸ್ ವೈರ್ ಸರಿಪಡಿಸಲು ಸ್ಟೇ ತಂತಿ ಸಮೇತ ವಿದ್ಯುತ್ ವೈರ್‌ನ್ನು ಸ್ಪರ್ಶಿಸಿದ ವೇಳೆ ಹಳೆಯದಾದ ಸರ್ವಿಸ್ ವೈರ್‌ನಿಂದ ಸ್ಟೇ ತಂತಿ ಮೂಲಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ದಯಾನಂದ ಅವರ ತಂದೆ ರಾಮ ಬಂಗೇರ ಅವರು ಕಾಸರಗೋಡು ಜಿಲ್ಲೆಯ ಬದಿಯಡ್ಕದ ಹೋಟೆಲ್ ಒಂದರಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಈ ಹಿಂದೆಯೇ ನಿಧನರಾಗಿದ್ದಾರೆ. ವಿವಾಹಿತನಾಗಿರುವ ಸಹೋದರ ಚಹಾ ಹುಡಿ ಲೈನ್ ಸೇಲ್ ಮಾಡುವ ಕಾರ್ಯಕ ನಡೆಸುತ್ತಿದ್ದು, ಪ್ರಸ್ತುತ ಪತ್ನಿಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ದಯಾನಂದ ಅವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರೆಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment