ವಿದ್ಯುತ್ ತಿದ್ದುಪಡಿ ಮಸೂದೆಗೆ ವಿರೋಧ

ಹುಳಿಯಾರು, ಮೇ ೩೦- ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್‍ನ ರೈತ ಘಟಕ, ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಬಾರದು ಎಂದು ಒತ್ತಾಯಿಸಿದೆ.
ಈ ಸಂಬಂಧ ಘಟಕದ ಹುಳಿಯಾರು ಹೋಬಳಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೇಶಾದ್ಯಂತ ಕೋವಿಡ್–19 ಕಾರಣಕ್ಕೆ ಲಾಕ್‍ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊಸ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತಿರುವುದು ಸರಿಯಲ್ಲ. ದೊಡ್ಡ ದೊಡ್ಡ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ ಎಂದು ಜಿಲ್ಲಾ ಕಿಸಾನ್ ಘಟಕ ಕಾರ್ಯಾಧ್ಯಕ್ಷ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆಯ ಆರ್.ಗಿರೀಶ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು, ತಮ್ಮ ಸ್ನೇಹಿತ ವಿದ್ಯುತ್ ಉದ್ಯಮಿ ಗೌತಮ್ ಅದಾನಿ ಹಾಗೂ ಇತರರಿಗೆ ಲಾಭ ಮಾಡಿಕೊಡುವ ಸಲುವಾಗಿ ಈ ಹುನ್ನಾರ ಮಾಡುತ್ತಿದ್ದಾರೆ. ಈ ಮಸೂದೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಲು ರಾಜ್ಯ ಸರ್ಕಾರಕ್ಕೆ 21 ದಿನಗಳು ಗಡುವು ಇದ್ದು, ಅದು ಮುಗಿಯುವ ಹಂತದಲ್ಲಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕೇಂದ್ರದ ತಿದ್ದುಪಡಿಗೆ ಒಪ್ಪಿಗೆ ಸೂಚಿಸಬಾರದು. ಒಂದು ವೇಳೆ ಸೂಚಿಸಿದರೆ ರಾಜ್ಯಾದ್ಯಂತ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುತ್ತೇವೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಈರಣ್ಣ, ರೈತರಾದ ರಂಗನಕೆರೆ ವಿರೂಪಾಕ್ಷ, ಅಂಬಾರಪುರ ರಮೇಶ್, ಬೆಳ್ಳಾರ ಕರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.

 

Share

Leave a Comment