ವಿದ್ಯುತ್ ತಂತಿ ಸ್ಪರ್ಶ: ಮಹಿಳೆ ಮೃತ್ಯು

ಕಾಸರಗೋಡು, ಜು.೧೮- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೋರ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕುಂಬಳೆಯ ಶೇಡಿಕಾವಿನಲ್ಲಿ ನಿನ್ನೆ ನಡೆದಿದೆ. ತಂತಿ ಕೈಯ್ಯಲ್ಲಿ ಹಿಡಿದಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಶೇಡಿಕಾವು ನಿವಾಸಿ ದಿ.ರಾಧಾಕೃಷ್ಣ ಮಯ್ಯ ಎಂಬವರ ಪತ್ನಿ ಕಲಾವತಿ(೫೨) ಮೃತಪಟ್ಟ ಮಹಿಳೆ. ಇವರು ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯ ಅಲ್ಪ ದೂರದ ಹಿತ್ತಲಲ್ಲಿ ಕಟ್ಟಿಗೆ ಸಂಗ್ರಹಿಸಲಾಗಿದ್ದು, ಅದರಿಂದ ಕಟ್ಟಿಗೆ ತೆಗೆಯುವ ಸಂದರ್ಭ ದುರಂತ ನಡೆದಿರಬೇಕೆಂದು ಶಂಕಿಸಲಾಗಿದೆ.
ಮಂಗಳವಾರ ಸಂಜೆ ಮಕ್ಕಳು, ಸಂಬಂಧಿಕರು ಇವರನ್ನು ಫೋನ್ ಮೂಲಕ ಸಂಪರ್ಕಿಸಲೆತ್ನಿಸಿದ್ದರು. ಆದರೆ ಅವರು ಫೋನ್ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಬಂಧಿಕರು ಮನೆಗೆ ಬಂದು ಹುಡುಕಾಡಿದಾಗ ವಿದ್ಯುತ್ ತಂತಿ ಕೈಯಲ್ಲಿ ಹಿಡಿದ ಸ್ಥಿತಿಯಲ್ಲಿ ಕಲಾವತಿಯವರ ಮೃತದೇಹ ಪತ್ತೆಯಾಗಿದೆ. ಬಳಿಕ ಕುಂಬಳೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment