ವಿದ್ಯುತ್ ತಂತಿ ಸ್ಪರ್ಶ : ಬಾಲಕ ಸಾವು

ಲಿಂಗಸೂಗೂರು.ಜು.17- ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ.
ಇಲ್ಲಿಯ ಸಮೀಪದ ಸುಣಗಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಪ್ರಶಾಂತ ತಂದೆ ಗುಂಡಪ್ಪ ಲಮಾಣಿ (9) ಎಂಬ ಬಾಲಕ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಶಾಲೆಗೆ ಹೋಗುವ ದಾರಿಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿರುವುದೇ ಬಾಲಕನ ಸಾವಿಗೆ ಕಾರಣವಾಗಿದೆ. ಮೂಲತಃ ದೇವದುರ್ಗ ತಾಲೂಕಿನ ಸಿರವಾರ ತಾಂಡಾದ ಗುಂಡಪ್ಪ, ಯಮನವ್ವ ಎನ್ನುವ ದಂಪತಿ ಇಬ್ಬರು ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ಲಿಂಗಸೂಗೂರಿಗೆ ಬಂದಿದ್ದರು.
ಮೃತ ಬಾಲಕನ ತಂದೆ ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದರೇ, ತಾಯಿ ಯಮನವ್ವ ಹಾಸ್ಟೆಲ್‌ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ಇಂದು ಮುಂಜಾನೆ ಶಾಲೆಗೆ ಹೋದ ಮಗ ಮತ್ತೇ ಬಾರದ ಲೋಕಕ್ಕೆ ಹೋಗಿರುವುದು ಈ ಕುಟುಂಬಕ್ಕೆ ತೀರದ ದುಃಖ ತಂದೊಡ್ಡಿದೆ. ಆಸ್ಪತ್ರೆಯಲ್ಲಿ ಮಗುವನ್ನು ಕಳೆದುಕೊಂಡ ತಾಯಿಯ ರೋಧನೆ ಮುಗಿಲು ಮುಟ್ಟುವಂತಿತ್ತು.
@12bc = ಮಿಂಚಿನ ಪ್ರತಿಭಟನೆ
ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಯಿಂದ ಈ ದುರ್ಘಟನೆ ಸಂಭವಿಸಿದೆಂದು ತೀವ್ರ ಆಕ್ರೋಶಗೊಂಡ ಬಂಜಾರ ಸಮಾಜದ ಮುಖಂಡರು ಜೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದರು. ಮಗುವಿನ ಸಾವಿಗೆ ಜೆಸ್ಕಾಂ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಯಿತು. ಪಟ್ಟಣ ಪ್ರದೇಶದಲ್ಲಿ ಅವೈಜ್ಞಾನಿಕ ವಿದ್ಯುತ್ ಕಂಬ ಹಾಗೂ ತಂತಿ ಜೋಡಣೆಯಿಂದ ಜನ ಭಯ ಭೀತಗೊಂಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪದೇ ಪದೇ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ಶಾಲಾ ಬಾಲಕನೋರ್ವನು ಮೃತಪಡಲು ಕಾರಣವಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.

Leave a Comment